ನಾನ್ ಸಿಆರ್ಝೆಡ್ ಮರಳುಗಾರಿಕೆ ವೇ ಬ್ರಿಡ್ಜ್ ಅಳವಡಿಸಿದ ಗುತ್ತಿಗೆದಾರರಿಗೆ ಅವಕಾಶ: ದ.ಕ. ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು, ಅ. 30: ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅ. 15ರಿಂದ ಅವಕಾಶವಿದ್ದು, ಗುತ್ತಿಗೆದಾ ರರು ವೇ ಬ್ರಿಡ್ಜ್ ಅಳವಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯ ವೇಳೆ ಪ್ರಶ್ನೆಯೊಂದಕ್ಕೆ ಅವರು ಈ ಮಾಹಿತಿ ನೀಡಿದರು.
ನಾನ್ ಸಿಆರ್ಝೆಡ್ನಲ್ಲಿ 25 ಗುತ್ತಿಗೆದಾರರಿದ್ದು, ಕಾನೂನು ಪ್ರಕಾರ ಅವರೆಲ್ಲರೂ ಸ್ಟಾಕ್ಯಾರ್ಡ್ನಲ್ಲಿ ವೇ ಬ್ರಿಡ್ಜ್ ಅ.15ರೊಳಗೆ ಅಳವಡಿಸಬೇಕಿತ್ತು. ಅದು ಆಗದಿರುವ ಕಾರಣ ಒಂದು ತಿಂಗಳು ಮತ್ತೆ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಅಗತ್ಯ ಬಿದ್ದರೆ ನಾನ್ ಸಿಆರ್ಝಡ್ ಪ್ರದೇಶದಲ್ಲಿ ಹೆಚ್ಚಿನ ಬ್ಲಾಕ್ಗಳನ್ನು ಗುರುತಿಸಲು ಜಿಲ್ಲಾಡಳಿತ ಚಿಂತನೆ ನಡೆಸಲಿದೆ. ಆದರೆ, ಈಗಾಗಲೇ ಗುರುತಿಸಲಾದ 25 ಬ್ಲಾಕ್ಗಳಲ್ಲಿ ಗುತ್ತಿಗೆದಾರರು ಅನುಮತಿ ನೀಡಿದಷ್ಟು ಪ್ರಮಾಣದಲ್ಲಿ ಮರಳನ್ನು ತೆಗೆದಿಲ್ಲ. ಹೀಗಾಗಿ ಹೆಚ್ಚಿನ ಬ್ಲಾಕ್ಗಳ ಅಗತ್ಯ ಕಾಣುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಮರಳಿನ ಕೊರತೆಯಾಗುತ್ತಿರುವ ವಿಚಾರ ಅರಿವಿದೆ ಎಂದು ಹೇಳಿದ ಜಿಲ್ಲಾಧಿಕಾರಿ, ಜೂನ್ನಿಂದ ಅ.15ರ ವರೆಗೆ ಮುಂಗಾರು ಅವಧಿಯಾದ ಕಾರಣ ಮರಳು ತೆಗೆಯಲು ಅವಕಾಶವಿರಲಿಲ್ಲ ಎಂದರು.
ಮರಳಿನ ಲಭ್ಯತೆ ಹೆಚ್ಚಾದ ಬಳಿಕ ಕಾಳಸಂತೆಯಲ್ಲಿ ಮರಳು ಮಾರಾಟ ಕಡಿಮೆಯಾಗಲಿದೆ. ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರು, ಗಣಿ ಇಲಾಖೆ, ಹಾಗೂ ಪಂಚಾಯತ್ರಾಜ್ ಅಧಿಕಾರಿಗಳ ತಂಡ ಅಕ್ರಮ ಮರಳು ತೆಗೆಯುವ ಸ್ಥಳಗಳ ಮೇಲೆ ನಿಗಾ ಇರಿಸಿದ್ದು, ಈಗಾಗಲೇ ಮರಳು ಹಾಗೂ ಸಾಗಾಟದ ಲಾರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸು ತ್ತಿದೆ ಎಂದು ಹೇಳಿದರು.
ಸಿಆರ್ಝಡ್ ವ್ಯಾಪ್ತಿಯಲ್ಲಿ ಬೋಟ್ಗಳಿಗೆ ಅಡ್ಡಲಾಗಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಜಿಲ್ಲಾಡಳಿತವು ಎನ್ಐಟಿಕೆ ಸುರತ್ಕಲ್ ಸಹಾಯದಿಂದ ಬ್ಯಾಥಮೆಟ್ರಿ ಸರ್ವೇಯನ್ನು ಈಗಾಗಲೇ ನಡೆಸಿದೆ. ಪರಿಸರ ಅನುಮತಿಗಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅನುಮತಿಯನ್ನು ನಿರೀಕ್ಷಿಸಲಾಗು ತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.







