ಅಲೋಶಿಯಸ್ ಸ್ನಾತಕೋತ್ತರ ವಿದ್ಯಾರ್ಥಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

ಮಂಗಳೂರು: ನಗರದ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನಲ್ಲಿ ಎಂಎಸ್ಸಿ ಗಣಿತಶಾಸ್ತ್ರದ (202325 ಬ್ಯಾಚ್) ಸ್ನಾತಕೋತ್ತರ ವಿದ್ಯಾರ್ಥಿ ಸ್ಟೆಬಿನ್ ಶಿಬು, ತನ್ನ ಸ್ನಾತಕೋತ್ತರ ಸಂಶೋಧನೆಗಾಗಿ ‘ಇಂಡಿಯಾ ಬುಕ್ ಆಫ್ ರೆಕಾಡ್ಸ್ 2025ರ ಐಬಿಆರ್ ಅಚೀವರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
‘ಮೈಕೆಲಿಸ್- ಮೆಂಟೆನ್ ಕೈನೆಟಿಕ್ಸ್‌ನ ಏಕೀಕರಣ ಮತ್ತು ಪಾಂಟ್ರಿಯಾಜಿನ್‌ನ ಗರಿಷ್ಟ ತತ್ವವನ್ನು ಅತ್ತುತ್ತಮ ಕಿಮೋಥೆರಪಿ ವೇಳಾಪಟ್ಟಿಗಾಗಿ ಸಂಯೋಜಿಸುವುದು’ ಎಂಬ ಶೀರ್ಷಿಕೆಯ ಸ್ನಾತಕೋತ್ತರ ಸಂಶೋಧನೆಗಾಗಿ ಈ ಪ್ರಶಸ್ತಿ ಸ್ಟೆಬಿನ್ ಶಿಬು ಅವರಿಗೆ ನೀಡಲಾಗಿದೆ. ಅವರ ಕೆಲಸವನ್ನು ಭಾರತದಲ್ಲಿ ಗಣಿತ ಆಂಕೊಲಾಜಿಯ ಉದಯೋನ್ಮುಖ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ಎಂದು ಗುರುತಿಸಲಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಈ ಅಧ್ಯಯನವನ್ನು 2025ರ ಎಪ್ರಿಲ್ 15ರಂದು ಅಧಿಕೃತವಾಗಿ ಅಂಗೀಕರಿಸಿ ಪ್ರಮಾಣೀಕರಿಸಿದೆ.
ಈ ಸಂಶೋಧನೆಯು ಕ್ಯಾನ್ಸರ್ ಚಿಕಿತ್ಸೆಯ ಕ್ಷೇತ್ರದಲ್ಲಿ ಭಾರತದೊದಲ ಗಣಿತ ಮಾಡೆಲಿಂಗ್ ಆಧಾರಿತ ಅಧ್ಯಯನವಾಗಿದ್ದು, ಕೀಮೋಥೆರಪಿ ಕಾರ್ಯವಿಧಾನಗಳ ದಕ್ಷತೆಯನ್ನು ಸುಧಾರಿಸಲು ನಿಯಂತ್ರಣ ಸಿದ್ಧಾಂತ ಮತ್ತು ಗಣಿತ ಮಾದರಿಗಳನ್ನು ಬಳಸುತ್ತದೆ.
ಅಲೋಶಿಯ ವಿವಿಯ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನುಪ್ರಿಯಾ ಶೆಟ್ಟಿ ಮತ್ತು ಸ್ವೀಟಿ ಬೇಸಿಲ್ ಅವರು ಯಶಸ್ವಿ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದರು.
ಇದಲ್ಲದೆ, ಮೇಲಿನ ಸಂಶೋಧನೆಗಾಗಿ ಅವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕೂಡ ನಾಮನಿರ್ದೇಶನಗೊಂಡಿದ್ದಾರೆ.
ಸ್ಟೆಬಿನ್ ಶಿಬು ಕೇರಳದ ಕೊಲ್ಲಂ ಮೂಲದವರು. ಅವರು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಅಧ್ಯಯನದ ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆದಿದ್ದಾರೆ.
ಮಾರ್‌ಥೋಮಾ ಚರ್ಚ್‌ನ ಸುವಾರ್ತಾಬೋಧಕ ಶಿಬು ಮ್ಯಾಥ್ಯೂ ಮತ್ತು ಕೇರಳದ ಕೊಲ್ಲಂನ ಸುನಿ ಶಿಬು ಅವರ ಪುತ್ರ. ಸ್ಟೆಬಿನ್ ಶಿಬುರವರ ಸಾಧನೆಗಾಗಿ ಅಲೋಶಿಯಸ್ ವಿವಿಯ ಆಡಳಿತ ಮಂಡಳಿ, ಉಪಕುಲಪತಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿ, ಹಾರೈಸಿದ್ದಾರೆ.







