ಆಳ್ವಾಸ್‌ನ ಗಣರಾಜ್ಯೋತ್ಸವದ ವೈಭವದಲ್ಲಿ 30,000ಕ್ಕೂ ಅಧಿಕ ಮಂದಿ ಭಾಗಿ

ಮಂಗಳೂರು, ಜ.26: ಕ್ರಿಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ, ಜಾತಿ ಮತ ಮೀರಿದ ಬಾಂಧವ್ಯ ಹಾಗೂ ಸಮಾನತೆಯೇ ದೇಶದ ಸುಭದ್ರ ಅಡಿಪಾಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಸ್ಥಳೀ ಯರು ಸೇರಿದಂತೆ 30,000ಕ್ಕೂ ಅಧಿಕ ಜನರು ವಿದ್ಯಾಗಿರಿಯಲ್ಲಿ ಸೇರಿದ್ದರು.
ಆಳ್ವಾಸ್ ಸಂಸ್ಥೆಯ 6,257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ತಂಡದಿಂದ ಗಾಯನ ನಡೆಯಿತು.
ಸುಮಾರು 300ಕ್ಕೂ ಅಧಿಕ ಮಾಜಿ ಸೈನಿಕರು ಧ್ವಜ ವಂದನೆ ಸಲ್ಲಿಸಿದರು. ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ. ಅವರಿಂದ ಗೌರವ ರಕ್ಷೆ ಸ್ವೀಕರಿಸಿದ ನ್ಯಾಯಮೂರ್ತಿ, ಬ್ಯಾಂಡ್ ಹಾಗೂ ಗೌರವಗಳೊಂದಿಗೆ ವೇದಿಕೆಗೆ ಬಂದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೇಡ್ ವರದಿ ಸಲ್ಲಿಸಿದರು. ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ 2 ಲಕ್ಷ ರೂ. ನೀಡಿ ಗೌರವಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತರಿದ್ದರು.
ಉಪನ್ಯಾಸಕ ರಾಜೇಶ್ ಡಿಸೋಜ, ಕಲಾ ವಿಭಾಗದ ಡೀನ್ ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







