ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ

ಮಂಗಳೂರು, ಜು.21: ಅಮೃತ ಪ್ರಕಾಶ ಪತ್ರಿಕೆಯ 10ನೇ ವರುಷದ ಸಂಭ್ರಮದ ಅಂಗವಾಗಿ ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಇಂದಿನ ದಿನಮಾನದಲ್ಲಿ ಪತ್ರಿಕೆ ನಡೆಸುವುದು ಕಷ್ಟದ ಕೆಲಸ. ಮುದ್ರಣದ ಬೆಲೆ ಹೆಚ್ಚಳಗೊಂಡಿದೆ, ಓದುಗರ ಸಂಖ್ಯೆ ಇಳಿಮುಖಗೊಂಡಿದೆ. ಇಂತಹ ಸಂದಿಗ್ಧತೆಯ ನಡುವೆಯೂ ಮಾಲತಿ ಶೆಟ್ಟಿ ಅವರು ಪತ್ರಿಕೆಯನ್ನು ಹೊರತರುತ್ತಿರುವುದು ಪ್ರಸಂಶನೀಯ ಎಂದರು.
ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಈ ಹಿಂದೆ ನಿಯತಕಾಲಿಕಗಳು ಜನರ ಒಡನಾಡಿಯಾಗಿ ದ್ದವು. ಈಗ ಟಿವಿ, ಮೊಬೈಲ್ ಕಾರಣದಿಂದ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಅಮೃತ ಪ್ರಕಾಶ ಪತ್ರಿಕೆ ಉತ್ತಮವಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ರಾಗತರಂಗ ಸಂಸ್ಥೆಯ ಅಧ್ಯಕ್ಷೆ ಆಶಾ ಹೆಗ್ಡೆ ಅತಿಥಿಯಾಗಿದ್ದರು. ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಶಿಕ್ಷಕಿ ಸುರೇಖಾ ಯಳವಾರ ಕಾರ್ಯಕ್ರಮ ನಿರೂಪಿಸಿದರು. ಅರುಣಾ ನಾಗರಾಜ ವಂದಿಸಿದರು.







