ದುಷ್ಕರ್ಮಿಗಳಿಂದ ಭಯದ ವಾತಾವರಣ ಸೃಷ್ಟಿಸಲು ಯತ್ನ: ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು, ಜೂ.10: ಕೇಂದ್ರದಲ್ಲಿ ಮೂರನೇ ಅವಧಿಗೆ ನರೇಂದ್ರ ಮೋದಿ ಸರಕಾರದ ಪದಗ್ರಹಣಗೈಯುವ ಸಂದರ್ಭ ಬೋಳಿಯಾರ್ ನಲ್ಲಿ ಸಂಭ್ರಮ ಆಚರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಚೂರಿ ಇರಿತ ಖಂಡನೀಯ. ಇಂತಹ ಕೃತ್ಯಗಳ ಮೂಲಕ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.
ಇಂತಹ ಘಟನೆಗಳು ಪದೇ ಪದೇ ನಡೆಯಲು ಕಾಂಗ್ರೆಸ್ ಸರಕಾರವೇ ಕಾರಣ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿರುವ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಭಯಭೀತ ವಾತಾವರಣ ನಿರ್ಮಾಣ ಮಾಡಿದಂತೆಯೇ ಜಿಲ್ಲೆಯಲ್ಲೂ ಮಾಡುವ ಹುನ್ನಾರ ನಡೆಯುತ್ತಿದೆ. ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲ ಬಿಜೆಪಿ ಸರಕಾರದ ಆವಧಿಯಲ್ಲಿ ಶಾಂತಿಯುತವಾಗಿತ್ತು. ಆದರೆ ಕಾಂಗ್ರೆಸ್ ಆಡಳಿತ ಬಂದ ಮೇಲೆ ಮತಾಂಧ ಶಕ್ತಿಗಳು ವಿಜೃಂಭಿಸಲು ಆರಂಭಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಕೈಗೆತ್ತಿಕೊಳ್ಳುವವರನ್ನು ಮಟ್ಟ ಹಾಕಿ ಜನಸಾಮಾನ್ಯರು ಶಾಂತಿ ಸಾಮರಸ್ಯದಿಂದ ಬದುಕು ನಡೆಸುವ ರೀತಿಯಲ್ಲಿ ದಕ್ಷವಾಗಿ ಕರ್ತವ್ಯ ನಿರ್ವಹಿಸುವ ಅಗತ್ಯದೆ. ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಸಬೇಕೆಂದು ಸತೀಶ್ ಕುಂಪಲ ಆಗ್ರಹಿಸಿದ್ದಾರೆ.





