ಅನಂತಾಡಿ: ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರ, ಸಮವಸ್ತ್ರ ವಿತರಣೆ

ಬಂಟ್ವಾಳ : ತಾಲೂಕಿನ ಅನಂತಾಡಿ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕದ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕರ, ಸಮವಸ್ತ್ರ ವಿತರಣೆ, "ಸ್ವಚ್ಛಸಖಿ" ನಾಮಕರಣ ಮಾಡುವ ಬ್ರ್ಯಾಂಡಿಂಗ್ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಎ. ಮಾತನಾಡಿ,
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಘಟಕವಿದ್ದು, ತ್ಯಾಜ್ಯ ಸಂಗ್ರಹಣ ವ್ಯವಸ್ಥೆಗೆ ನೂತನ ಯೋಜನೆ ಅನುಷ್ಠಾನ ಗೊಳಿಸುತ್ತಿದ್ದು, ಇದರ ಅಂಗವಾಗಿ ಸ್ವಚ್ಛತಾ ನೌಕರರಿಗೆ "ಸ್ವಚ್ಛ ಸಖಿ" ಎಂದು ನಾಮಕರಣ ಮಾಡಲಾಗಿದೆ. ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹಣ ಸ್ವಚ್ಛ ಸಖಿಯರಿಗೆ ಸಾರ್ವಜನಿಕರು ಒಣ ಕಸವನ್ನು ನೀಡಿ ಸಹಕರಿಸಬೇಕು ಎಂದು ಹೇಳಿದರು.
ಪಂಚಾಯತ್ ಉಪಾಧ್ಯಕ್ಷೆ ಸಂಧ್ಯಾ ಕೆ., ಸದಸ್ಯರಾದ ಪುರಂದರ ಗೌಡ, ಶಶಿಕಲಾ, ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ಸಂಜೀವಿನಿ ಒಕ್ಕೂಟದ ಪ್ರೇಮಾ, ಗೀತಾ, ಸ್ವಚ್ಛ ಸಖಿಯರಾದ ಚಂದ್ರಾವತಿ, ಬೇಬಿ, ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಬಿ. ಕಾರ್ಯಕ್ರಮ ನಿರ್ವಹಿಸಿದರು.