ಅನಸ್ತೇಷಿಯಾ, ಗೈನೆಕಾಲಜಿ, ಮಕ್ಕಳ ತಜ್ಞರ ವೇತನ ಹೆಚ್ಚಳಕ್ಕೆ ಕ್ರಮ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ರಾಜ್ಯದಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಮಾಸಿಕ ವೇತನ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೆಡಿಪಿ ತ್ರೈಮಾಸಿಕ ಸಭೆಯ ಚರ್ಚೆಯ ವೇಳೆ ಆರೋಗ್ಯ ಸಚಿವರೂ ಆಗಿರುವ , ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಪ್ರಸ್ತಾಪಿಸಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಸ್ತೇಷಿಯಾ, ಗೈನೆಕಾಲಜಿಸ್ಟ್ ಹಾಗೂ ಮಕ್ಕಳ ತಜ್ಞರ ಕೊರತೆ ಇದೆ. ಈ ಹುದ್ದೆಗಳ ನೇಮಕಾತಿಗೆ ಯಾರೂ ಮುಂದೆ ಬರುತ್ತಿಲ್ಲ ಎಂದು ಪ್ರಸ್ತಾಪಿಸಿದರು.
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಖಾತರಿಗೆ ತಾಂತ್ರಿಕ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಲ್ವಿನ್ ಡಿಸೋಜಾ ಪ್ರಸ್ತಾಪಿಸಿ, ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯ ಇದ್ದರೂ ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರೇ ಸರಿಯಾಗಿ ಬರುತ್ತಿಲ್ಲ ಎಂದು ಗಮನ ಸೆಳೆದರು.