ಆರ್. ಅಶೋಕರ ಪಕ್ಷದ ಉಸ್ತುವಾರಿಗಳು ಕಮಿಶನ್ ಏಜೆಂಟರುಗಳಾ ? : ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನೆ

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್ ಎಂದು ಕರ್ನಾಟದ ವಿಧಾನ ಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಮಾಡಿರುವ ಟೀಕೆಯನ್ನು ಖಂಡಿಸಿರುವ ಮಾಜಿ ಸಚಿವ ಬಿ. ರಮಾನಾಥ ರೈಅವರು 'ಅಶೋಕರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಏನು? ಕಮಿಶನ್ ಏಜೆಂಟರುಗಳಾ ? ಎಂದು ಪ್ರಶ್ನಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆಶೋಕ್ ಅವರ ಹೇಳಿಕೆ ತಿಳಿಗೇಡಿತನದ್ದು, ಅವರು ಆಗಾಗ ಪ್ರಬುದ್ದತೆ ಇಲ್ಲದ ಬಾಲಿಶ ಹೇಳಿಕೆಯನ್ನು ನೀಡುತ್ತಿದ್ದಾರೆ. ಕೆಸಿ ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಅವರ ಬಗ್ಗೆ ಅಶೋಕ್ ಇಂತಹ ಟೀಕೆ ಮಾಡಿರುವುದು ಸರಿಯಲ್ಲ.
ಅಶೋಕ ಅವರು ತಮ್ಮ ಸ್ಥಾನವನ್ನು, ಜವಾಬ್ದಾರಿಯನ್ನು ಮರೆತು, ತಮಗೆ ತೋಚಿದಂತೆ ಇನ್ನೊಂದು ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಗ್ಗೆ ಕೆಟ್ಟದ್ದಾಗಿ ಟೀಕೆ ಮಾಡುವುದು ಎಷ್ಟು ಸರಿ? ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್ ಎಂದಾಗಿದ್ದರೆ, ಅಶೋಕ್ ಅವರ ಬಿಜೆಪಿಯಲ್ಲಿರುವ ಪ್ರಧಾನ ಕಾರ್ಯದರ್ಶಿಗಳು ಬ್ರೋಕರ್ ಗಳಾ? ಅಥವಾ ಅವರನ್ನು ಏನೆಂದು ಕರೆಯಬೇಕು ? ಎಂದು ರೈ ವಾಗ್ದಾಳಿ ನಡೆಸಿದರು.
ಅಶೋಕ್ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಮಾಡಿದ್ದೇನು? ಮಂಗಳೂರಿನ ಕೆಎಸ್ ಆರ್ ಟಿಸಿ ಜಮೀನನ್ನು ಖಾಸಗಿ ಯವರಿಗೆ ಮಾರಾಟ ಮಾರಾಟ ಮಾಡಲಾಗಿತ್ತು. ಇಂತಹ ಹಲವು ಪ್ರಕರಣಗಳು ರಾಜ್ಯದ ಹಲವಡೆ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು
ಅಶೋಕ್ ಅವರಿಗೆ ನೈತಿಕತೆ ಇಲ್ಲ. ಅವರ ಪಕ್ಷದಲ್ಲಿ ಏನಾಗುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಮೊದಲು ಅಶೋಕ್ ತಮ್ಮ ಪಕ್ಷದ ಬಗ್ಗೆ ತಿಳಿದುಕೊಳ್ಳಲಿ. ಅಶೋಕರಿಗೆ ನೈತಿಕತೆ ಇಲ್ಲ, ಅವರು ಅವರ ಪಕ್ಷದಲ್ಲಿ ಏನಾಗುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ, ಆನಂತರ ಬೇರೆ ಪಕ್ಷಗಳ ನಾಯಕರ ಬಗ್ಗೆ ಮಾತನಾಡಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸುವ ವೇಳೆ ಏರ್ ಪೊರ್ಟ್ ನಲ್ಲಿ ಆಗಿರುವ ಘಟನೆಯ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ರೈ ಸ್ಪಷ್ಟ ನೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಅಶ್ರಫ್ ಮತ್ತು ಶಶಿಧರ್ ಹೆಗ್ಡೆ, ಪಕ್ಷದ ಧುರೀಣರಾದ ವಿಶ್ವಾಸಕುಮಾರ್ ದಾಸ್, ಸುಭೋದಯ ಆಳ್ವ, ಶಬೀರ್, ಬೇಬಿ ಕುಂದರ್, ಪದ್ಮನಾಭ, ನಝೀರ್ ಬಜಾಲ್, ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.







