ಪುಸ್ತಕಗಳ ಬಗ್ಗೆ ಕೃತಕ ಅಭಿಪ್ರಾಯಗಳು ಅಪಾಯಕಾರಿ ಬೆಳವಣಿಗೆ: ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಮಂಗಳೂರು: ಕನ್ನಡ ಸಾಹಿತ್ಯವನ್ನು ಸಾರಾಸಗಟಾಗಿ ಓದುತ್ತಿದ್ದ ಕಾಲವೊಂದಿತ್ತು. ಅದರಲ್ಲೂ ರವಿವಾರದ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯವನ್ನು ಇಷ್ಟಪಟ್ಟು ಓದುವವರ ಸಂಖ್ಯೆಯೂ ಹೆಚ್ಚಿತ್ತು. ಸಾಮಾಜಿಕ ಜಾಲತಾಣ ಬಂದ ಬಳಿಕ ಯುವ ಸಮೂಹ ಆ ಓದುವಿನಿಂದ ವಿಮುಖವಾಗಿದೆ. ಪುಸ್ತಕಗಳ ಬಗ್ಗೆ ಕೃತಕ ಅಭಿಪ್ರಾಯ ಪ್ರಕಟಿಸುವ ಧಾವಂತ ಹೆಚ್ಚುತ್ತಿದೆ. ಸಾಹಿತ್ಯದ ದೃಷ್ಟಿಯಿಂದ ಇದು ಹೆಚ್ಚು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ವಿಮರ್ಶಕ, ಅಂಕಣಕಾರ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು.
ಸಸಿ ಪ್ರಕಾಶನ ಪ್ರಕಟಿಸಿದ, ಮುನವ್ವರ್ ಜೋಗಿಬೆಟ್ಟು ಬರೆದ : ʼಟಚ್ ಮೀ ನಾಟ್ʼ ಕಥಾ ಸಂಕಲನವನ್ನು ನಗರದ ಸಂತ ಅಲೋಶಿಯಸ್ ಡೀಮ್ಡ್ ವಿವಿಯ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನಡ ವಿಭಾಗ, ರಂಗ ಅಧ್ಯಯನ ಕೇಂದ್ರದ ವಿವಿಯ ರಾಬರ್ಟ್ ಸಿಕ್ವೇರ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈಗ ಸಾಹಿತ್ಯದ ಎಲ್ಲ ಆಗುಹೋಗುಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬರುತ್ತಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡರೂ ಕೂಡ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪು ಎನ್ನಲಾರೆ ಎಂದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಈ ಕೃತಿಯ ಒಳಹೂರಣವು ಚೆನ್ನಾಗಿವೆ. ಸಮಾಜವನ್ನು ತಲ್ಲಣ, ಪಲ್ಲಟಗೊಳಿಸುವತ್ತ ಕಥೆಗಾರರು ಪ್ರಯತ್ನಿಸಿದ್ದಾರೆ. ಒಬ್ಬ ಲೇಖಕ ಪ್ರಸಿದ್ಧಿ ಬಯಸುವುದು ಸಹಜ. ಆದರೆ ಓದುಗರ ನೆನಪಿನಲ್ಲಿ ಉಳಿಯುವಂತಹ ಕೃತಿಯನ್ನು ಬರೆದರೆ ಕೃತಿಕಾರರ ಸಾಹಿತ್ಯ ಕೃಷಿಯು ಸಾರ್ಥಕತೆ ಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಕಥೆಗಾರ್ತಿ ಸುಧಾ ಅಡುಕಳ ಮಾತನಾಡಿ ಇಂದು ಎಣಿಕೆಗೆ ಸಿಗದಷ್ಟು ಕೃತಿಗಳು ಹೊರಬರುತ್ತದೆ. ಸ್ಪರ್ಧೆಗಳಿಂದ ಸಾಹಿತ್ಯ ಬರೆಯುವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕತೆಗಳ ಬಗ್ಗೆ ಕತೆಗಳು ಮತ್ತು ಕತೆಯೊಳಗೆ ಕತೆಗಳೂ ಇರುತ್ತದೆ. ಕತೆಗಳು ಒಂದಕ್ಕೊಂದು ಬೆಸದಂತೆ ಮನಸ್ಸುಗಳನ್ನೂ ಬೆಸೆಯುತ್ತದೆ. ಕತೆಗಳು ಕಿಟಕಿಯಂತೆ. ಒಬ್ಬೊಬ್ಬರು ತಮ್ಮ ಮನೆಯ ಕಿಟಕಿಗಳಲ್ಲಿ ಇಣುಕಿ ನೋಡುವಾಗಿನ ದೃಶ್ಯಗಳು ಬೇರೆ ಬೇರೆ ಆಗಿರುತ್ತದೆ. ಅಂತೆಯೇ ಇಲ್ಲಿನ ಕತೆಗಳು ಕಿಟಕಿಯಂತಿವೆ. ಭಾಷಾ ಪ್ರಯೋಗವೂ ಉತ್ತಮವಾಗಿದೆ. ಕಥಾ ವಸ್ತುವು ವೈವಿಧ್ಯಮವಗಿದೆ ಎಂದು ಹೇಳಿದರು.
ಲೇಖಕ ಮುನವ್ವರ್ ಜೋಗಿಬೆಟ್ಟು ಮತ್ತು ಸಸಿ ಪ್ರಕಾಶನದ ಪ್ರಕಾಶಕ ಜಯರಾಮಾಚಾರಿ ಮಾತನಾಡಿದರು. ಸೈಫ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.







