ಅರುಣ್ ಕುಮಾರ್ ಪುತ್ತಿಲ - ಮಹಿಳೆ ಸಂಭಾಷಣೆಯ ಆಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾದ ಸಂಭಾಷಣೆ

ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಮಹಿಳೆಯೋರ್ವರ ಜೊತೆ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆಯೊಂದು ವೈರಲ್ ಆಗಿದೆ.
ಈ ಆಡಿಯೋ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದೆ. ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ದ್ದೆಂದು ಹೇಳಲಾದ ಈ ಮೊಬೈಲ್ ಸಂಭಾಷಣೆಯು ಪುತ್ತಿಲ ಅವರ ರಾಜಕೀಯವನ್ನು ಇತಿಶ್ರೀಗೊಳಿಸಲು ಮಾಡಿರುವ ಹುನ್ನಾರವಿರಬಹುದೇ ಎಂಬ ಶಂಕೆಯು ಹಲವರಲ್ಲಿದೆ.
ಈ ಸಂಭಾಷಣೆಯು ಇತ್ತೀಚೆಗೆ ಅಂದರೆ ಪುತ್ತೂರು ನಗರ-ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರ ಆಯ್ಕೆ ನಡೆದ ಬಳಿಕ ನಡೆದ ಹಾಗಿದೆ. ಯಾಕೆಂದರೆ ಈ ಸಂಭಾಷಣೆಯಲ್ಲಿ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷತೆ ನೀಡಿರುವುದನ್ನು ಪ್ರಸ್ತಾಪಿಸಿರುವ ಮಹಿಳೆಯು ಪುತ್ತಿಲಗೆ ಏನೂ ಇಲ್ಲ. ಪುತ್ತಿಲನದ್ದು ಇನ್ನು ಮುಂದೆ ಮುಗಿದ ಅಧ್ಯಾಯ. ಯಾವುದೂ ಸಿಗುವುದಿಲ್ಲ. ಪುತ್ತಿಲ ಇನ್ನು ಮುಂದೆ ಬ್ಯಾನರ್ ಕಟ್ಟಲು ಮಾತ್ರ ಉಪಯೋಗ ಎಂದು ಮೂದಲಿಸುತ್ತಾರೆ.
ಈ ಸಂಭಾಷಣೆಯಲ್ಲಿ ಮೂರುವರೆ ಕೋಟಿ ಡೀಲ್ ಮಾಡಿರುವ ವಿಚಾರವೂ ಸೇರಿಕೊಂಡಿದೆ. ಪುತ್ತಿಲರಲ್ಲಿ ಮಾತನಾಡುತ್ತಾ ನೀವು ಹಣ ಪಡೆದ ಬಗ್ಗೆಯೂ ನನಗೂ ಗೊತ್ತಿದೆ ಎಂದು ಹೇಳುವ ಮಹಿಳೆ ಪುತ್ತಿಲ ಬಿಜೆಪಿಗೆ ರಾಜನ ಹಾಗೇ ಹೋಗಬೇಕಾಗಿತ್ತು. ನಿಮಗೆ ಎಷ್ಟು ಸಲ ನಾನು ಹೇಳಿದ್ದೆ. ನೀವು ಏನು ಮಾಡಿದ್ರಿ, ಜವಾಬ್ದಾರಿ ಸಿಗದೇ ಇದ್ರೆ ಬಿಜೆಪಿ ಕಚೇರಿಗೆ ಕಾಲು ಇಡುವುದಿಲ್ಲ ಎಂದಿದ್ದ ನೀವು ನಾಚಿಕೆಗೆಟ್ಟು ಈಗ ಅಲ್ಲಿಗೆ ಹೋದ್ರಿ. ಅಕ್ಷರಶ; ನೀವು ಈಗ ನಾಶವಾಗಿದ್ದೀರಿ ಎಂದು ಕೆಣಕುತ್ತಾರೆ.
ರಾಜಕೀಯದಲ್ಲಿ ಮಾನ ಮರ್ಯಾದೆ ಬಿಟ್ಟು ಇದ್ರೆ ಮಾತ್ರ ದೊಡ್ಡ ಜನ ಆಗುತ್ತಾರೆ. ಇಲ್ಲಿ ದೊಡ್ಡ ಜನ ಆದವರೂ ನಾಚಿಕೆ ಮಾನ ಮರ್ಯಾದೆ ಬಿಟ್ಟು ಆದವರು ಎನ್ನುವ ಮಾತು ಕೂಡಾ ಪುತ್ತಿಲದ್ದೆಂದು ಹೇಳಲಾಗುವ ಧ್ವನಿಯಲ್ಲಿದೆ.
ರಾಜಕೀಯ ಅಂದರೆ ಸುಳ್ಳು. ರಾಜಕೀಯದಲ್ಲಿ ಯಾರನ್ನೂ ನಂಬುವ ಪ್ರಶ್ನೆಯೇ ಇಲ್ಲ. ನಮಗೆ ರಾಜಕೀಯದಲ್ಲಿ ಭವಿಷ್ಯವೇ ಇಲ್ಲ ಎಂದು ನಿರ್ಧಾರ ಮಾಡಿದ್ದೇವೆ. ಇಲ್ಲದಿದ್ರೆ ನಾವು ಸೋಲುತ್ತಿರಲಿಲ್ಲ ಎನ್ನುವ ಸಂಭಾಷಣೆಯೂ ಇಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಿಮ್ಮಪ್ಪ ಗೌಡ ಆಶಾ ಎಂದು ಮೆಸೇಜ್ ಮಾಡಿದ್ರಿ. ಬೆಂಗಳೂರಿನಲ್ಲಿ ಸಿಕ್ಕಾಗ ಎಂಬ ಮಾತುಗಳ ಆಧಾರದಿಂದ ಊರಿನಿಂದ ದೂರವಿರುವ ಮಹಿಳೆ ಎಂಬುವುದು ಸ್ಪಷ್ಟವಾಗುತ್ತಿದೆ. ಆದರೆ ಈಕೆಯ ಮಾತಿನ ಆಧಾರದಿಂದ ಮೊಬೈಲ್ನಲ್ಲಿ ನಿರಂತರ ಟಚ್ ನಲ್ಲಿರುತ್ತಾರೆ ಎಂಬುವುದೂ ಸ್ಪಷ್ಟವಾಗುತ್ತಿದೆ.
ಇವರಿಬ್ಬರ ಸಂಭಾಷಣೆಯ ಕೊನೆಗೆ ಈ ಸಲ ನಾನೊಂದು ‘ಕಡ್ಡಿ’ ಇಟ್ಟಿದ್ದೇನೆ ನಿಮಗೆ ಎಂದು ನಗುತ್ತಾ ಈಗ ಅದನ್ನು ಹೇಳುವುದಿಲ್ಲ. ಕೆಲವು ದಿನ ಕಳೆಯಲಿ ಎಂದು ಜೋರಾಗಿ ನಗುತ್ತಲೇ ಮಾತುಕತೆ ಮುಗಿಯುತ್ತದೆ. ಈ ಸಂಭಾಷಣೆ ವೈರಲ್ ಆಗುತ್ತಿದ್ದಂತೆ ಪುತ್ತಿಲ ಪರಿವಾರದಿಂದ ಹೊರಬಂದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ‘ಅರುಣಣ್ಣಾ.. ನಾನು ತುಂಬಾ ಸಲ ಫೋನ್ ಮಾಡಿದೆ. ಆದರೆ ನೀವು ನನ್ನ ಕರೆ ಸ್ವೀಕರಿಸುತ್ತಿಲ್ಲ. ನಿಮ್ಮ ಬೇರೆ ಬೇರೆ ನಂಬರ್ ಗಳಿಗೂ ಮಾಡಿದೆ. ನನಗೆ ನಿಮ್ಮಲ್ಲಿ ತುಂಬಾ ವಿಷಯ ಮಾತನಾಡ್ಲಿಕ್ಕೆ ಉಂಟು. ಅಟ್ಲೀಸ್ಟ್ ನಾಳೆ ನನಗೆ ನೀವು ಫೋನ್ ಮಾಡಬೇಕು. ಇಲ್ಲದಿದ್ದರೆ ನಾನು ಪಬ್ಲಿಕ್ ಜತೆಗೆ ಮಾತಾಡಬೇಕಾಗುತ್ತದೆ. ವಿತ್ ಆಲ್ ರೆಕಾರ್ಡ್ಸ್, ಆಡಿಯೋಸ್, ವೀಡಿಯೋಸ್, ಆ್ಯಂಡ್ ಸ್ಕ್ರೀನ್ಶಾಟ್ಸ್,,! ಎನ್ನುವ ಎಚ್ಚರಿಕೆ ನೀಡಲಾಗಿದೆ.
ಜತೆಗೆ ಅಮ್ಮೀ ಅಂದ್ರೆ ಯಾರು .. ನೀವು ನನ್ನ ಜತೆ ಮಾತನಾಡುವುದಿಲ್ಲ ಎಂದು ಗೊತ್ತುಂಟು. ಆದರೆ ಈ ಅಮ್ಮೀ ಅಂದ್ರೆ ಯಾರು.. ಅದನ್ನು ಮೊದಲು ಹೇಳಿ ನೋಡೋಣ ಎನ್ನುವ ವ್ಯಂಗ್ಯ ಧ್ವನಿಯೂ ಸಾಕಷ್ಟು ವೈರಲ್ ಆಗುತ್ತಿದೆ. ಈ ಆಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಇದರ ಬಗ್ಗೆ ಜನರು ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ಆದರೆ ಇದರ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪುತ್ತಿಲ ಪರಿವಾರದ ಯಾರೂ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಈ ಅಡಿಯೋ ಸಂಬಾಷಣೆ ವೈರಲ್ ಆಗಿರುವುದು ಮಹಿಳೆಯ ಕಡೆಯಿಂದ ಎಂಬುದಕ್ಕೆ ಆಕೆ ನಿಮಗೊಂದು ಕಡ್ಡಿ (ಪಿನ್) ಇಟ್ಟಿದ್ದೇನೆ ಎಂದು ಹೇಳಿರುವುದು ಸ್ಪಷ್ಟ ಪಡಿಸುತ್ತದೆ. ಆದರೆ ಆಕೆ ಯಾರು.. ಪುತ್ತಿಲ ಹಾಗೂ ಆಕೆಯ ನಡುವೆ ನಡೆದಿರುವ ಈ ಸಂಭಾಷಣೆ ಸತ್ಯವಾ.. ಒಂದು ವೇಳೆ ಇದು ನಿಜವಾದ ವಿಚಾರವೇ ಆದರೆ ಇದರ ಹಿಂದೆ ಯಾರಿದ್ದಾರೆ.. ಈ ಮೂರುವರೆ ಕೋಟಿ ಡೀಲ್ ಯಾರ ಜತೆಗೆ, ಪುತ್ತಿಲರ ಗೆಳತಿ ಎಂದು ಹೇಳಲಾದ ಈ ಮಹಿಳೆಗೆ ಡೀಲ್ ವಿಚಾರ ಹೇಗೆ ಗೊತ್ತು.. ಈ ಡೀಲ್ ನಡೆದಿರುವುದು ಬೆಂಗಳೂರಿನಲ್ಲಿಯಾ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸದ್ಯಕ್ಕೆ ನಿಗೂಢವಾಗಿದೆ.







