ವಲಸೆ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಬಳಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ನಡೆದ ಹಲ್ಲೆಯನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಖಂಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಆಗ್ರಹಿಸಿದೆ.
ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು ʼಬಾಂಗ್ಲಾ ನುಸುಳುಕೋರʼ ಎಂದು ಆಪಾದಿಸಿ ಹಲ್ಲೆ ನಡೆಸುವ ಸಂದರ್ಭ ಆತನಿಂದ ಹಲವು ಬಾರಿ ʼಜೈ ಶ್ರೀರಾಮ್ʼ ಘೋಷಣೆ ಹಾಕಿಸಿದ್ದಾರೆನ್ನಲಾಗಿದೆ. ಪೊಲೀಸರು ಈ ʼದೇಶಭಕ್ತʼ ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ ಗಳಡಿ ಪ್ರಕರಣ ದಾಖಲಿದ್ದಾರೆ. ತಕ್ಷಣ ಈ ದುಷ್ಕರ್ಮಿಗಳನ್ನು ಬಂಧಿಸಬೇಕು, ಮತ್ತಷ್ಟು ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಜಿಲ್ಲಾಡಳಿತ ಸಂತ್ರಸ್ತ ವಲಸೆ ಕಾರ್ಮಿಕನಿಗೆ ಸೂಕ್ತ ರಕ್ಷಣೆ ಹಾಗು ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದೆ.
ಈ ರೀತ ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತಿ ಅಪಾಯಕಾರಿ ಆಗಿದ್ದು, ಮುಂದಿನ ದಿನಗಳಲ್ಲಿ ಮಂಗಳೂರಿನ ಅಭಿವೃದ್ದಿ, ಶಾಂತಿ, ಸೌಹಾರ್ದತೆಗೆ ಮತ್ತಷ್ಟು ಧಕ್ಕೆ ಉಂಟಾಗಲಿದೆ. ವಲಸೆ ಕಾರ್ಮಿಕರು, ಮತೀಯ ಪುಂಡರ ಅನುಮಾನಕ್ಕೆ ಒಳಗಾದ ಅಪರಿಚಿತರು ಮುಸ್ಲಿಮರು ಎಂದು ಗೊತ್ತಾದ ತಕ್ಷಣ ಜೈ ಶ್ರೀರಾಮ್ ಘೋಷಣೆ ಹಾಕಲು ಬಲವಂತ ಪಡಿಸುವುದು ಜಾತ್ಯಾತೀತತೆ, ಧಾರ್ಮಿಕ ಸ್ವಾತಂತ್ರ್ಯದ ಅಡಿಗಲ್ಲನ್ನೆ ಅಳುಗಾಡಿಸುವ ಅತಿ ಅಪಾಯಕಾರಿ ಬೆಳವಣಿಗೆ ಆಗಿದೆ. ಈ ಹಿಂದೆ ಕುಡುಪು ಬಳಿ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆಯ ಸಂದರ್ಭದಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿತ್ತು. ಸರಕಾರ ಈ ಬೆಳವಣಿಗೆಗಳನ್ನು ಪೊಲೀಸರಿಗಷ್ಟೆ ಬಿಟ್ಟು ಬಿಡಬಾರದು. ಸೂಕ್ತ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.







