ಅಥರ್ವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯ ಬೀಗಮುದ್ರೆ ತೆರವು: ಸಾರ್ವಜನಿಕರ ಆರೋಪ
ಚಿಕಿತ್ಸೆ ವೇಳೆ ಬಾಲಕ ಮೃತ್ಯು ಪ್ರಕರಣ

ಸುರತ್ಕಲ್, ನ.28: ಇಲ್ಲಿನ ಅಥರ್ವ ಆರ್ಥೊ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಬಾಲಕನ ಮೃತಪಟ್ಟಿರುವ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕಕ್ಕೆ ಹಾಕಿದ್ದ ಬೀಗಮುದ್ರೆಯನ್ನು ತೆರವುಗೊಳಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ವಿಚಾರಣೆಗೆ ನೇಮಕಗೊಂಡಿದ್ದ ವೈದ್ಯಕೀಯ ತಜ್ಞ ಸಮಿತಿ ರವಿವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಳಿಕ ಸಮಿತಿಯ ಸೂಚನೆಯಂತೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಹಾಕಿದ್ದ ಬೀಗ ಮುದ್ರೆ ತೆರವುಗೊಳಿಸಲಾಗಿದೆ ಎಂದು ಸಾರ್ವಜನಿಕರು ಹಾಗೂ ಮೃತ ಬಾಲಕನ ಕುಟುಂಬ ಆರೋಪಿಸಿದೆ.
ಆಸ್ಪತ್ರೆಯಲ್ಲಿ ಯಾವುದೇ ಅನಾಹುತ ನಡೆದೇ ಇಲ್ಲ ಎಂಬಂತೆ ಅದು ಕಾರ್ಯಾಚರಿಸುತ್ತಿದ್ದು, ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳುವುದಕ್ಕಿಂತ ಮುಂಚೆಯೇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗವನ್ನು ತೆರೆದುಕೊಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಕುಳಾಯಿ ನಿವಾಸಿ ಮೊಯ್ದಿನ್ ಫರ್ಹಾನ್‌ರಿಗೆ ಅಗತ್ಯವಿಲ್ಲದಿದ್ದರೂ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಬಾಲಕನಿಗೆ ಅರಿವಳಿಕೆ ನೀಡುವಲ್ಲಿನ ಎಡವಟ್ಟು ಬಾಲಕನ ಸಾವಿಗೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾಗಿ ಇದಕ್ಕೆ ಸಂಬಂಧಿಸಿ ಪೂರ್ಣ ತನಿಖೆ ನಡೆಯುವ ವರೆಗೆ ಆಸ್ಪತ್ರೆ ಮೇಲೆ ಕೆಲ ನಿರ್ಬಂಧಗಳನ್ನು ವಿಧಿಸಬೇಕಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಆಸ್ಪತ್ರೆ ಕಾರ್ಯಾಚರಿಸಲು ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
"ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಮೇಲೆ ನಮಗೆ ನಂಬಿಕೆ ಇದೆ. ಮೊಯ್ದಿನ್ ಫರ್ಹಾನ್ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ತನಿಖೆಗೆ ಪೂರಕವಾಗಿರುವ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಹಾಗಾಗಿ ಕಾಲಮಿತಿಯ ಒಳಗೆ ಅಂದರೆ 2-3 ವಾರಗಳ ಒಳಗಾಗಿ ಬಾಲಕನ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಈ ಮೊದಲೂ ವೈದ್ಯಕೀಯ ಲೋಪಗಳ ಪ್ರಕರಣಗಳಲ್ಲಿ ವರದಿಗಳು ಬಂದಿಲ್ಲ ಎಂದು ದಿನ ದೂಡುವುದು ಕಂಡುಬಂದಿತ್ತು. ಆದರೆ ಇನ್ನೂ ಕಾಲಹರಣಕ್ಕೆ ಅವಕಾಶ ನೀಡುವುದಿಲ್ಲ".
- ಮುನೀರ್ ಕಾಟಿಪಳ್ಳ ರಾಜ್ಯಾಧ್ಯಕ್ಷ, ಡಿವೈಎಫ್‌ಐ
"ತನಿಖೆ ಪೂರ್ಣಗೊಳ್ಳದೆ ಮುಚ್ಚಲಾಗಿದ್ದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ ಕಾರ್ಯಾರಂಭಕ್ಕೆ ಅವಕಾಶ ನೀಡಿರುವುದು ತಪ್ಪು. ಆ ಮೂಲಕ ತನಿಖೆಗೆ ಆಯ್ಕೆ ಮಾಡಿರುವ ತಜ್ಞವೈದ್ಯರ ಮೇಲಿನ ನಂಬಿಕೆಯನ್ನು ನಾವು ಕಳೆದುಕೊಳ್ಳುವಂ ತಾಗಿದೆ. ಜಿಲ್ಲಾಡಳಿತ, ರಾಜ್ಯ ಸರಕಾರ ಆರೋಗ್ಯ ಇಲಾಖೆ ಮತ್ತು ತನಿಖಾ ಸಮಿತಿಗೆ ನ್ಯಾಯಯುವ ಪಾರದರ್ಶಕ ಮತ್ತು ಸಂತ್ರಸ್ತರಿಗೆ ನೆರವಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಬೇಕು".
- ಹಮ್ಮಬ್ಬ ಬದವಿದೆ, ಮೊಯ್ದಿನ್ ಫರ್ಹಾನ್‌ರ ದೊಡ್ಡಪ್ಪ
"ಆಸ್ಪತ್ರೆ ಸಾರ್ವಜನಿಕ ವಲಯದಲ್ಲಿರುವುದರಿಂದ ನಿರಂತರವಾಗಿ ಶಸ್ತ್ರಚಿಕಿತ್ಸಾ ಕೊಠಡಿಗೆ ಬೀಗ ಮುದ್ರೆ ಹಾಕುವಂತಿಲ್ಲ. ಜೊತೆಗೆ ಅದು ನಮ್ಮ ಪರಿಧಿಗೂ ಬರುವುದಿಲ್ಲ. ನಮ್ಮ ತನಿಖೆಗೆ ಮತ್ತು ಮಹಜರಿಗೆ ಬೇಕಾಗಿದ್ದ ಸಮಯದಲ್ಲಿ ಜಪ್ತಿ ಮಾಡಿ ಬೀಗಮುದ್ರೆ ಹಾಕಲಾಗಿತ್ತು. ಈ ವೇಳೆ ಬಾಲಕನ ಶಸ್ತ್ರಕ್ರಿಯೆಗೆ ಬಳಸಿದ್ದ ಯಂತ್ರೋಪಕರಣಗಳು, ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ಕಾನೂನು ಸಲಹೆಗಾರರ ಸಲಹೆ ಪಡೆದು ಬೀಗಮುದ್ರೆ ತೆರವುಗೊಳಿಸಲಾಗಿದೆ".
- ರಘು ನಾಯಕ್, ಪ್ರಕರಣದ ಪೊಲೀಸ್ ತನಿಖಾಧಿಕಾರಿ
"ಬಾಲಕನ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ. ಈ ನಡುವೆ ಆಸ್ಪತ್ರೆಯ ಸಾಮಾನ್ಯ ಚಟುವಟಿಕೆಗೆ ನಾವು ಅಡ್ಡಿಪಡಿಸಲಾಗದು. ವೈದ್ಯಕೀಯ ತನಿಖಾ ಸಮಿತಿ ಆಸ್ಪತ್ರೆಗೆ ಭೇಟಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವೊಂದು ವಸ್ತುಗಳನ್ನು ಜಪ್ತಿ ಮಾಡಲಾಗಿದೆ".
-ಹಾಲೂರು ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ







