ಆತೂರು: ಆಯಿಶಾ ವಿದ್ಯಾಲಯದ 17ನೇ ವಾರ್ಷಿಕೋತ್ಸವ

ಆತೂರು: ಆಯಿಶಾ ವಿದ್ಯಾಲಯ, ಆತೂರು ಸಂಸ್ಥೆಯ 17ನೇ ವಾರ್ಷಿಕೋತ್ಸವವು ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು.
ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫಾತಿಮಾ ತಸ್ಕೀನ್ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಜಲೀಲ್ ಮುಕ್ರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಾಂಶುಪಾಲರು ವಾರ್ಷಿಕ ವರದಿಯನ್ನು ವಾಚಿಸಿ ಶಾಲೆಯ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ಬಹುತ್ವವನ್ನು ಗೌರವಿಸುವ ಹಾಗೂ ಸಮುದಾಯವನ್ನು ಜೋಡಿಸುವ ಮನೋಭಾವ ಶಿಕ್ಷಣ ಸಂಸ್ಥೆಗಳಲ್ಲಿ ರೂಪುಗೊಳ್ಳಬೇಕು ಎಂದು ಹೇಳಿದರು. ಸದುದ್ದೇಶ ಹಾಗೂ ಆಶಯಗಳ ಮೂಲಕ ಆಯಿಶಾ ವಿದ್ಯಾ ಸಂಸ್ಥೆ ಊರಿಗೆ ಹಾಗೂ ಸಮುದಾಯಕ್ಕೆ ಬೆಳಕಾಗಲಿ ಎಂದು ಆಶಿಸಿದರು.
ಹಳೆ ವಿದ್ಯಾರ್ಥಿನಿ ರೈಹಾನಾ ಕೆ. ತಮ್ಮ ವಿದ್ಯಾಲಯದ ಅನುಭವಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ಪಿಯು ಕಾಲೇಜು ಉಪ್ಪಿನಂಗಡಿ ಕಾರ್ಯನಿರ್ವಹಣಾ ಅಧ್ಯಕ್ಷ ಅಝೀಝ್ ಬಸ್ತೀಕಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಹಾಗೂ ಆಯಿಶಾ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಡಾ. ಅಬ್ದುಲ್ ಮಜೀದ್ ವಹಿಸಿ, ನಮ್ಮೊಳಗಿನ ಪ್ರತಿಭೆಯನ್ನು ಹೊರತಂದು ಅದರಲ್ಲಿ ಸಂತೋಷವನ್ನು ಕಂಡು ಜೀವನವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ಶಾಲಾ ನಾಯಕಿ 10ನೇ ತರಗತಿಯ ಶಾದಾ ರಹ್ಫಾ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿಯರಾದ ರಮ್ಯಾ ಮತ್ತು ನಿಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.







