ಆ.2, 3: ಯೆನೆಪೊಯ ನರ್ಸಿಂಗ್ ಕಾಲೇಜಿನಿಂದ ಅಂತಾರಾಷ್ಟ್ರೀಯ ಸಮ್ಮೇಳನ

ಉಳ್ಳಾಲ, ಜು.31: ಯೆನೆಪೊಯ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಯೆನೆಪೊಯ ನರ್ಸಿಂಗ್ ಕಾಲೇಜು ವತಿಯಿಂದ ಭಾರತೀಯ ನರ್ಸಿಂಗ್ ಸಂಘದ ಕರ್ನಾಟಕ ರಾಜ್ಯ ಶಾಖೆಯ ಸಹಯೋಗದಲ್ಲಿ 'ಮಿಶ್ರ ಸಂಶೋಧನಾ ವಿಧಾನಗಳ ಅನಿಯಮಿತ ಅವಕಾಶಗಳು: ಉನ್ನತ ಮಟ್ಟದ ಆರೋಗ್ಯ ಸೇವೆಗಳು ಮತ್ತು ಪರಿಜ್ಞಾನದ ಸಂಯೋಜನೆಗಳು' (ಎಕ್ಸ್ ಪ್ಲೊರಿಂಗ್ ದಿ ಬಾಂಡ್ ಲೆಸ್ ಒರಿಝೋನ್ ಆಫ್ ಮಿಕ್ಸ್ದ್ ಮೆಟೊಡ್ ರಿಸರ್ಚ್) ಎಂಬ ವಿಷಯದ ಕುರಿತು 2 ದಿನಗಳ ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನವು ಯೆನೆಪೊಯ ವಿವಿಯ ಯೆಂಡ್ಯೂರನ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಲೀನಾ ಕೆ.ಸಿ. ತಿಳಿಸಿದ್ದಾರೆ.
ಅವರು ತೊಕ್ಕೊಟ್ಟಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದರು. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ಬಿ.ಎಲ್. ಸುಜಾತಾ ರಾಥೋಡ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯೆನೆಪೊಯ ವಿಶ್ವವಿದ್ಯಾಲಯ ಕುಲಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪಕುಲಪತಿ ಡಾ. ವಿಜಯಕುಮಾರ್ ಎಂ., ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಉಪಕುಲಪತಿ ಡಾ.ಶ್ರೀಪತಿ ರಾವ್, ಪ್ರಾಂಶುಪಾಲ ಡಾ. ಲೀನಾ ಕೆ.ಸಿ., ಯೆನೆಪೋಯ ನರ್ಸಿಂಗ್ ಕಾಲೇಜು ಮತ್ತು ಈ ಸಂಶೋಧನಾ ಸಮ್ಮೇಳನದ ಅಧ್ಯಕ್ಷ ಡಾ. ಬಿನ್ಮಾ ಪಾಪಚ್ಚನ್ ಸಿ. ಉಪಸ್ಥಿತರಿರುವರು.
ನರ್ಸಿಂಗ್ ಮತ್ತು ಇತರ ಆರೋಗ್ಯ ಸೇವಾ ಕ್ಷೇತ್ರಗಳ ಸುಮಾರು 300 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರದ ಸಂಸ್ಥೆಗಳ 13ಕ್ಕೂ ಹೆಚ್ಚು ಸಂಶೋಧಕರು ತಮ್ಮ ಸಂಶೋಧನಾ ವರದಿಯನ್ನು ಮಂಡಿಸಲಿದ್ದಾರೆ. 150ಕ್ಕೂ ಹೆಚ್ಚು ನರ್ಸಿಂಗ್, ವೈದ್ಯಕೀಯ ಮತ್ತು ಅರೆವೈದ್ಯಕೀಯ ವೈಜ್ಞಾನಿಕ ಸಂಶೋಧನೆಯ ವರದಿ ಪತ್ರಿಕೆಗಳು ಮತ್ತು ಪೋಸ್ಟ್ ಗಳನ್ನು ಪ್ರಸ್ತುತಪಡಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೆನೆಪೊಯ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಡಾ. ಬಿನ್ಮಾ ಪಾಪಚ್ಚನ್, ನರ್ಸಿಂಗ್ ಫೌಂಡೇಶನ್ ವಿಭಾಗದ ಪ್ರೊ.ಶಶಿಕುಮಾರ್ ಜವಡಗಿ, ವೈದ್ಯಕೀಯ ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಸಾಯಕ ಪ್ರಾಧ್ಯಾಪಕರಾದ ಅಂಜು ಉಲ್ಲಾಸ್, ಹೇಜಿಲ್ ರೀಮಾ ಬಾರ್ಬೋಝ ಉಪಸ್ಥಿತರಿದ್ದರು.







