ಜಲ ದೀಪಾವಳಿಯಿಂದ ನೀರಿನ ಮಹತ್ವದ ಜಾಗೃತಿ: ಸಂಸದ ನಳಿನ್ ಕುಮಾರ್

ಮಂಗಳೂರು, ನ.8: ವಿಜಯಪುರದಂತಹ ನೀರಿನ ಸಮಸ್ಯೆ ಅತಿಯಾಗಿ ಕಾಡುವ ಜಿಲ್ಲೆಗಳ ಜನರ ಸಂಕಷ್ಟ ಅರಿತಾಗ ನೀರಿನ ಮಹತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ. ಹಾಗಾಗಿ ಸಾಕಷ್ಟು ನೀರಿನ ಮೂಲವನ್ನು ಹೊಂದಿರುವ ಮಂಗಳೂರು ನಗರದ ಜನರಿಗೂ ನೀರಿನ ಮಿತವಾದ ಬಳಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಲ ದೀಪಾವಳಿ ಕಾರ್ಯಕ್ರಮ ಅತ್ಯಂತ ಉಪಯುಕ್ತ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅಮೃತ್ ಅಭಿಯಾನದಡಿ ನಗರದ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ತುಂಬೆ ಅಣೆಕಟ್ಟಿನ ಬಳಿ ಗುರುವಾರ ಆಯೋಜಿಸಿದ್ದ ‘ಜಲ ದೀಪಾವಳಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕುಡಿಯುವ ನೀರಿನ ಮಹತ್ವದ ಕುರಿತಂತೆ ಪ್ರಧಾನಿಯವರ ಆಶಯದಂತೆ ಕಲಬುರಗಿ, ರಾಯಚೂರು ಮೊದಲಾದ ಕಡೆ ಮನೆ ಮನೆಗೆ ಗಂಗೆಯ ಪರಿಕಲ್ಪನೆಯಾದರೆ, ನಗರ ಪ್ರದೇಶಗಳಲ್ಲಿ ಅಮೃತ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ನೀರಿನ ಮೂಲ, ನೀರಿನ ಸಂಸ್ಕರಣೆ ಹಾಗೂ ಪೂರೈಕೆಯ ಬಗ್ಗೆ ಜಾಗೃತಿ ಮೂಡಿಸಲು ಜಲ ದೀಪಾವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸರಕಾರದ ಲೆಕ್ಕಾಚಾರ ಪ್ರಕಾರ ವ್ಯಕ್ತಿಯೊಬ್ಬರಿಗೆ ದಿನಕ್ಕೆ 135 ಲೀಟರ್ ನೀರಿನ ಅಗತ್ಯವಿರುತ್ತದೆ. ನೇತ್ರಾವತಿ ನದಿಯಿಂದ ತುಂಬೆ ಅಣೆಕಟ್ಟಿನಲ್ಲಿ ಎತ್ತಲಾಗುವ ನೀರನ್ನು ಯಾವ ರೀತಿಯಲ್ಲಿ ಸಂಸ್ಕರಣೆಗೊಳಪಡಿಸಿ ನಗರದ ಜನತೆಗೆ ಪೂರೈಕೆ ಮಾಡಲಾಗುತ್ತದೆ ಎಂಬುದನ್ನು ಮಹಿಳೆಯರು ತಿಳಿದುಕೊಂಡು ನೀರಿನ ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ನೀರಿನ ಜಾಗೃತಿ ಮೂಡಿಸುವ ಕೇಂದ್ರ ಸರಕಾರದ ವಿನೂತನ ಕಾರ್ಯಕ್ರಮ ಜಲ ದೀಪಾವಳಿಯಡಿ ನಗರದ ಮಹಿಳೆಯರಿಗೆ ನೀರಿನ ಮಹತ್ವದ ಬಗ್ಗೆ ನೀರಿನ ಸಂಸ್ಕರಣಾ ಘಟಕದಲ್ಲಿ ಕೈಗೊಳ್ಳಲಾಗುವ ಪ್ರಕ್ರಿಯೆಗಳನ್ನು ತೋರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರದ ತುಂಬೆ ಅಣೆಕಟ್ಟಿಗೆ ಪೂರಕವಾಗಿ ಹೊಸ 20 ಎಂಎಲ್ಡಿ ನೀರು ಸಂಸ್ಕರಣಾ ಘಟಕವು ಕೆಲವೇ ತಿಂಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ನಮ್ಮ ಅಗತ್ಯಕ್ಕೆ ತಕ್ಕಂತೆ ನೀರಿನ ಬಳಕೆ ಆದಾಗ ಬೇಸಿಗೆಯಲ್ಲಿ ನಗರವನ್ನು ಕಾಡುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಜಲ ದೀಪಾವಳಿ ಉತ್ತಮ ಕಾರ್ಯಕ್ರಮ ಎಂದರು.
ಪಾಲಿಕೆ ಆಯುಕ್ತ ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಉಳ್ಳಾಲ ನಗರ ಸಭೆಯ ತಲಾ 30 ಸ್ವಸಹಾಯ ಸಂಘಗಳ ಆಯ್ದ ಮಹಿಳೆಯರಿಗೆ ಜಲ ದೀಪಾವಳಿ ಕಾರ್ಯಕ್ರಮದಲ್ಲಿ ನೀರಿನ ಮೂಲ, ಸಂಸ್ಕರಣೆ ಹಾಗೂ ಪೂರೈಕೆಯ ಕಾರ್ಯವಿಧಾನಗಳ ಬಗ್ಗೆ ಜಾಗೃತಿಯನ್ನು ನೀಡಲಾಗುತ್ತಿದೆ ಎಂದರು.
ಉಪ ಮೇಯರ್ ಸುನೀತಾ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ವರುಣ್ ಚೌಟ, ಲೋಹಿತ್ ಅಮೀನ್, ಗಣೇಶ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಉಪಸ್ಥಿತರಿದ್ದರು.
ತುಂಬೆ ನೀರು ಸಂಸ್ಕರಣಾ ಘಟಕದ ಪ್ರಮುಖರಾದ ರಾಜೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ತುಂಬೆ ಅಣೆಕಟ್ಟಿನ ಎದುರುಗಡೆಯ ರಾಮಲ್ ಕಟ್ಟೆಯ ನೀರು ಸಂಸ್ಕರಣಾ ಘಟಕದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲ ನಗರಸಭೆಯ ತಲಾ 30 ಸ್ವಸಹಾಯ ಸಂಘಗಳ ಒಟ್ಟು 60 ಮಹಿಳೆಯರಿಗೆ ನೀರು ಸಂಸ್ಕರಣೆಯ ವಿಧಾನ, ಪ್ರಯೋಗಾಲದ ಮಾಹಿತಿಯನ್ನು ನೀಡಲಾಯಿತು.
ತುಂಬೆ ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರು ಒಂದು ಮೀಟರ್ ಗಾತ್ರದ ಪೈಪ್ ಮೂಲಕ ರಾಮಲ್ ಕಟ್ಟೆಯ ಸಂಸ್ಕರಣಾ ಘಟಕಕ್ಕೆ ಹರಿದು ಅಲ್ಲಿ ಸುಮಾರು ಐದು ಹಂತಗಳಲ್ಲಿ ನೀರು ಶುದ್ಧೀಕರಣಗೊಂಡು ಪೈಪ್ ಲೈನ್ಗಳ ಮೂಲಕ ನಗರಕ್ಕೆ ಪೂರೈಕೆಯಾಗುವ ವಿಧಾನವನ್ನು ಮಹಿಳೆಯರಿಗೆ ವಿವರಿಸುವ ಜತೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ನೀರು ಪೈಪ್ ನಲ್ಲಿ ನದಿಯಿಂದ ನೇರ ಬರುತ್ತದೆ ಅಂದುಕೊಂಡಿದ್ದೆ!
‘ನಮ್ಮ ಮನೆಗೆ ಪೈಪ್ ಮೂಲಕ ನೀರು ನದಿಯಿಂದ ಬರುತ್ತದೆ ಅಂದುಕೊಂಡಿದ್ದೆ. ನಾನು ಬಟ್ಟೆ ಒಗೆಯುವಾಗಲೂ ಸಾಕಷ್ಟು ನೀರು ಉಪಯೋಗಿಸುತ್ತೇನೆ. ಆದರೆ ಇಲ್ಲಿ ನೀರು ಶುದ್ಧಗೊಳ್ಳುವ ವಿಧಾನವನ್ನು ನೋಡಿದಾಗ ನೀರಿನ ಮಹತ್ವದ ಅರಿವಾಗಿದೆ. ನೀರನ್ನು ಮಿತವಾಗಿ ಬಳಸಬೇಕೆಂಬ ಜಾಗೃತಿಯೂ ಮೂಡಿದೆ’ ಎಂದು ಸ್ವಸಹಾಯ ಸಂಘದ ಸದಸ್ಯೆ ತಾರಾ ಅನಿಸಿಕೆ ವ್ಯಕ್ತಪಡಿಸಿದರು.







