ಯುನಿವೆಫ್ ವತಿಯಿಂದ ಮಾದಕ ವ್ಯಸನ ವಿರುದ್ಧ ಜಾಗೃತಿ ರ್‍ಯಾಲಿ

ಮಂಗಳೂರು: ಮಾದಕ ವಸ್ತುಗಳ ಸೇವಿಸುವವರು, ಮಾರಾಟ, ಪೂರೈಕೆ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವು ದರಿಂದ ಮಾದಕ ವಸ್ತುಗಳ ಬಳಕೆಯನ್ನು ಸಮಾಜದಿಂದ ದೂರ ಮಾಡಲು ಸಾಧ್ಯ ಎಂದು ಯುನಿವೆಫ್ ಕರ್ನಾಟಕ ಇದರ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿದ್ದಾರೆ.
ಯುನಿವೆಫ್ ಕರ್ನಾಟಕ ಮಂಗಳೂರು ಶಾಖೆ ಇದರ ವತಿಯಿಂದ ಎಸ್‌ಸಿಎಸ್ ಕಾಲೇಜ್ ಆ್ಯಂಡ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈಯನ್ಸ್ ಮತ್ತು ಪೊಲೀಸ್ ಠಾಣೆ ಪಾಂಡೇಶ್ವರ ಠಾಣೆಯ ಸಹಯೋಗದೊಂದಿಗೆ ಶನಿವಾರ ಮಾದಕ ವ್ಯಸನ ಜಾಗೃತಿ ರ್‍ಯಾಲಿಯಲ್ಲಿ ಸಮಾರೋಪ ಭಾಷಣ ಮಾತನಾಡಿದರು.
ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಮಾದಕ ವಸ್ತು ಸೇವನೆಯ ದುಷ್ಪರಿಣಾಮವನ್ನು ಅರಿತುಕೊಳ್ಳಬೇಕಾಗಿದೆ. ಭಯೋತ್ಪಾದನೆ , ಕೋಮುವಾದ ಜನರ ಬದುಕನ್ನು ಎಷ್ಟು ಪ್ರಮಾಣದಲ್ಲಿ ದುರ್ಬಲಗೊಳಿಸಿದೆಯೋ ಅದೇ ರೀತಿ ಮಾದಕ ವಸ್ತು ಕೂಡಾ ದೇಶದಲ್ಲಿ ಜನರ ಆದೆಷ್ಟೋ ಜನರ ಬದುಕನ್ನು ನಾಶ ಮಾಡಿದೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಯುನಿವೆಫ್ ಕರ್ನಾಟಕ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಇದೀಗ ಮಾದಕ ವ್ಯಸನಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ ಎಲ್ಲರಿಗೂ ಸುಂದರ ಬದುಕನ್ನು ಕಟ್ಟಿಕೊಡಲು ಶ್ರಮಿಸಲಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾದರೆ ದೇಶವೇ ನಾಶವಾದಿತು. ಹೀಗಾಗಿ ದೇಶದ ಎಲ್ಲರಲ್ಲೂ ಮಾದಕ ವಸ್ತು ಸೇವನೆಯ ಬಗ್ಗೆ ಕಾಳಜಿ ಮೂಡಬೇಕು ಎಂದು ಹೇಳಿದರು.
ಎಸ್‌ಸಿಎಸ್ ಕಾಲೇಜಿನ ಉಪನ್ಯಾಸಕಿ ಅಶ್ವಿತ ಮಾತನಾಡಿ ಸಹವಾಸ ದೋಷದಿಂದಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಾರೆ. ಇದನ್ನು ತಡೆಗಟ್ಟಲು ಹೆತ್ತವರು, ಶಿಕ್ಷಕರು ಜೈಜೋಡಿಸಬೇಕು ಎಂದು ನುಡಿದರು.
ಪಾಂಡೇಶ್ವರ ಪೊಲೀಸ್ ಠಾಣೆಯ ಪಿಎಸ್ಸೈ ಪ್ರತಿಭಾ .ಕೆ.ಪಿ. ಮಾತನಾಡಿ ಯುವ ಜನರು ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಹೇಳಿದರು.
ಎಸ್‌ಸಿಎಸ್ ಕಾಲೇಜಿನ ಉಪನ್ಯಾಸಕಿ ನೇತ್ರಾ , ಯುನಿವೆಫ್ ಕರ್ನಾಟಕ ಮಂಗಳೂರು ಶಾಖೆಯ ಸಂಚಾಲಕ ಯು.ಕೆ. ಖಾಲಿದ್, ಸಹ ಸಂಚಾಲಕ ನೌಫಲ್ ಹಸನ್, ಉಬೈದುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ರ್ಯಾಲಿಯನ್ನು ಮನಪಾ ಸದಸ್ಯ ನವೀನ್ ಡಿ ಸೋಜ ಉದ್ಘಾಟಿಸಿದರು.
ಮಾದಕ ವ್ಯಸನ ಜಾಗೃತಿ ರ್ಯಾಲಿಯು ಫಳ್ನೀರ್ ಇಂದಿರಾ ಆಸ್ಪತ್ರೆಯ ಬಳಿಯಿಂದ ಮಿನಿವಿಧಾನ ಸೌಧದ ವರೆಗೆ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಂದ ಬೀದಿ ನಾಟಕ ನಡೆಯಿತು.







