ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ ನಿರಾಕರಣೆ ಸಲ್ಲದು: ಡಾ. ತಿಮ್ಮಯ್ಯ

ಮಂಗಳೂರು: ರಾಜ್ಯ ಸರಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ(ಎಬಿ-ಎಆರ್‌ಕೆ)ಯಲ್ಲಿ ನೋಂದಾಯಿತ ಯಾವುದೇ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯನ್ನು ನಿರಾಕರಿಸುವಂತಿಲ್ಲ. ಇಂತಹ ದೂರುಗಳು ಕೆಲವು ಆಸ್ಪತ್ರೆಗಳ ವಿರುದ್ಧ ಬಂದಿದೆ . ಇದನ್ನು ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವು ಆಸ್ಪತ್ರೆಗಳಲ್ಲಿ ಯೋಜನೆ ಮತ್ತು ಆರೋಗ್ಯ ಮಿತ್ರ ಸಿಬ್ಬಂದಿ ಇದ್ದರೂ, ನಮ್ಮಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಇಲ್ಲ ಎಂದು ಹೇಳಿ ಪೂರ್ಣ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದ.ಕ. ಜಿಲ್ಲಾಧಿಕಾರಿ ಅವರು ನಡೆಸಿದ ಫೋನ್ ಇನ್‌ನಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ ಎಂದರು.
ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಪ್ರಥಮ ಮತ್ತು ದ್ವಿತೀಯ ಹಂತದ ಕಾಯಿಲೆಗಳಿಗೆ ಹೊರಗೆ ರೆಫರಲ್ ಕೊಡುವುದಿಲ್ಲ. ಕ್ಯಾನ್ಸರ್ ಸಹಿತ ತೃತೀಯ ಹಂತದ ಚಿಕಿತ್ಸೆಗೆ ರೆಫರಲ್ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು
* ಆರೋಗ್ಯ ಕಾರ್ಡ್ ಕಡ್ಡಾಯವಲ್ಲ: ಅಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ, ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಹೊಂದಿರುವುದು ಕಡ್ಡಾಯವಲ್ಲ. ಆರೋಗ್ಯ ಕಾರ್ಡ್ ಇಲ್ಲದಿದ್ದರೂ, ಸೌಲಭ್ಯ ಪಡೆಯಲು ಅರ್ಹರಿರುವ ರೋಗಿಗಳ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ, ಪಡಿತರ ಚೀಟಿ ನೀಡಿ, ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
*ತುರ್ತು ಚಿಕಿತ್ಸೆಗೆ ನೇರ ಹೋಗಬಹುದು: ಹೃದಯಾಘಾತ, ಅಪಘಾತ ಮೊದಲಾದ ತುರ್ತು ಸಂದರ್ಭದಲ್ಲಿ ನೋಂದಾಯಿತ ಆಸ್ಪತ್ರೆಗೆ ನೇರವಾಗಿ ಕೊಂಡೊಯ್ದು ಚಿಕಿತ್ಸೆ ಪಡೆಯಬಹುದು. ಈ ನಿಟ್ಟಿನಲ್ಲಿ ಈಗಾಗೇ ಎಲ್ಲ ಆಸ್ಪತ್ರೆಗಳಿಗೆ ಪತ್ರ ಬರೆಯಲಾಗಿದೆ.
ನಗರದ ಎಲ್ಲ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಸಿಗುವ ಸಂಬಂಧ ಶೀಘ್ರದಲ್ಲಿ ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲ ಆಸ್ಪ ತ್ರೆಗಳ ಪ್ರಮುಖರ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
*108 ಆ್ಯಂಬುಲೆನ್ಸ್ ಉಸ್ತುವಾರಿ ಮತ್ತೆ ಆರೋಗ್ಯ ಇಲಾಖೆಗೆ : 108 ಆ್ಯಂಬುಲೆನ್ಸ್ ವಾಹನಗಳ ಉಸ್ತುವಾರಿ ಪುನಃ ಆರೋಗ್ಯ ಇಲಾಖೆಗೆ ದೊರೆಯಲಿದ್ದು, ಇದಕ್ಕೆ ಸಂಬಂಧಿಸಿ ಪೈಲೆಟ್ ಯೋಜನೆ ಚಾಮರಾಜನಗರದಲ್ಲಿ ಈಗಾಗಲೇ ಅನುಷ್ಠಾನಗೊಂಡಿದೆ.
ದ.ಕ. ಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್‌ಗಳ ಸಂಖ್ಯೆ 26 ಇದೆ. ಕೊರತೆ ಇರುವ ಸಿಬ್ಬಂದಿಯ ನೇಮಕಕ್ಕೆ ಶೀಘ್ರದಲ್ಲೇ ಅನುಮತಿ ದೊರೆಯಲಿದೆ ಎಂದು ಹೇಳಿದರು.
ಎನ್‌ಎಚ್‌ಎಂ: 9.67 ಕೋಟಿ ಮಂಜೂರು :ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವೇತನ ಪಾವತಿಗೆ 9.67 ಕೋಟಿ ಅನುದಾನ ಮಂಜೂರು ಆಗಿದೆ. ನವೆಂಬರ್ ನಿಂದ ಜನವರಿ ತನಕ ವೇತನ ಪಾವತಿಗೆ ಬಾಕಿ ಇದೆ. ಶೀಘ್ರದಲ್ಲೇ ಸಿಬ್ಬಂದಿಗೆ ಖಾತೆಗೆ ವೇತನದ ಮೊತ್ತ ಜಮಾ ಆಗಲಿದೆ. ಗುತ್ತಿಗೆ ವೈದ್ಯರು, ಪ್ರಯೋಗಾಲಯ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಸೇರಿದಂತೆ ಎಲ್ಲ ಹೊರಗುತ್ತಿಗೆ ನೌಕರರ ಗೌರವಧನವನ್ನೂ ಪಾವತಿಸಲಾಗಿದೆ ಎಂದು ಡಾ. ತಿಮ್ಮಯ್ಯ ಮಾಹಿತಿ ಒದಗಿಸಿದರು.







