ಬಜ್ಪೆ, ಕಿನ್ನಿಗೋಳಿ ಪ.ಪಂ ಚುನಾವಣೆಯ ಫಲಿತಾಂಶ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ: ಸತೀಶ್ ಕುಂಪಲ

ಮಂಗಳೂರು: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದು ಮುಂದೆ ಬರಲಿರುವ ಜಿ.ಪಂ ಮತ್ತು ತಾ.ಪಂ ಮತ್ತು ಗ್ರಾಮ ಪಂಚಾಯತ್ ಚುನಾವಣೆಯ ತಯಾರಿಗೆ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಎರಡೂ ಪಟ್ಟಣ ಪಂಚಾಯತ್‌ಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರುವುದು ಜನರ ಭಾವನೆಗಳು ಬಿಜೆಪಿ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.
ಈ ಚುನಾವಣೆ ಮೂಲಕ ಎಂಬ ಜನರ ಭಾವನೆಗಳನ್ನು ತಿಳಿದುಕೊಳ್ಳುವ ಅವಕಾಶ ಬಿಜೆಪಿ ಸಿಕ್ಕಿತು. ಇದರ ಜೊತೆಗೆ ಸ್ಥಳೀಯ ಶಾಸಕರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು , ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ವೈಫಲ್ಯವನ್ನು ಎಲ್ಲ ಕಡೆ ನೋಡಲು ಸಾಧ್ಯವಾಯಿತು ಎಂದು ನುಡಿದರು.
ಬಿಜೆಪಿಯನ್ನು ಬೆಂಬಲಿಸಿದ ಕ್ರಿಶ್ಚಿಯನ್ ಸಮುದಾಯ:
ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮತದಾರರು ಬಜ್ಪೆ ಮತ್ತು ಕಿನ್ನಿಗೋಳಿ ಪರಿಸರದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಿನ್ನಿಗೋಳಿ, ಕಟೀಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿ ಬಾರಿಯೂ ಪೈಪೋಟಿ ಇತ್ತು. ಈ ಬಾರಿ ಎಲ್ಲ ಕಡೆ ಬಿಜೆಪಿಯನ್ನು ಜನರು ಬೆಂಬಲಿಸಿದ್ದಾರೆ. ಬಜ್ಪೆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರಸ್‌ನ ಭದ್ರಕೋಟೆ ಬಜ್ಪೆಯ ಗ್ರಾಪಂಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಆಡಳಿತ ಇತ್ತು. ಒಂದೊಮ್ಮೆ ಕಾಂಗ್ರೆಸ್‌ನ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ಅಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಇದರೊಂದಿಗೆ ಮುಂದಿನ ಚುನಾವಣೆಗಳಿಗೆ ಬಿಜೆಪಿಗೆ ಪೂರಕ ವಾತಾವರಣ ಸಿಕ್ಕಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಕೇವಲ ಮುಖ್ಯ ಮಂತ್ರಿ ಕುರ್ಚಿಗೋಸ್ಕರ ಹೋರಾಟ ನಡೆಯತ್ತಿದೆ. ಅಭಿವೃದ್ಧಿ ಪರ ಕಾಳಜಿ ಇಲ್ಲ. ಇತ್ತೀಚೆಗೆ ಸಚಿವ ಭೈರತಿ ಸುರೇಶ್ ಅವರು ವಿಧಾನ ಸಭೆಯಲ್ಲಿ ದ.ಕ. ಜಿಲ್ಲೆಯ ಜನತೆಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸತೀಶ್ ಕುಂಪಲ ಆರೋಪಿಸಿದರು.
ರಾಜ್ಯ ಸರಕಾರ ಹಾಳಾಗಿರುವ ರಸ್ತೆ ಗಳ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಗೃಹ ಲಕ್ಷ್ಮೀ ದುಡ್ಡನ್ನು ಇನ್ನೂ ಕೂಡಾ ಸರಿಯಾಗಿ ಪಾವತಿಸಿಲ್ಲ. ಕೆಲವರಿಗೆ ಐದು ತಿಂಗಳಿನಿಂದ ಹಣ ಬಂದಿಲ್ಲ. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳಕ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದೀಗ ಬಿಜೆಪಿಯು ಹೋರಾಟ ಫಲವಾಗಿ ಫಲಾನುಭವಿಗಳಿಗೆ ಹಣ ಬರುತ್ತಿದೆ. ಗ್ಯಾರಂಟಿ ಯೋಜನೆಯಲ್ಲಿ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಹೇಳಿದರು.
ಬಜ್ಪೆ ಕಿನ್ನಿಗೋಳಿಯಲ್ಲಿ ಕಾಂಗ್ರೆಸ್‌ನ ಆಡಳಿತ ವಿರೋಧಿ ಅಲೆ ಏರಡೂ ಪಟ್ಟಣ ಪಂಚಾಯತ್ ನಲ್ಲಿ ಕಂಡು ಬಂದಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಬಗ್ಗೆ ಜನರಿಗೆ ಭ್ರಮ ನಿರಸನವಾಗಿದೆ ಎಂದು ಹೇಳಿದರು.







