ಬಜ್ಪೆ: ದಸಂಸದಿಂದ ಭೀಮಾ ಕೋರೆಂಗಾವ್ ಕದನ 208ನೇ ವರ್ಷದ ವಿಜಯೋತ್ಸವ

ಬಜ್ಪೆ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಭೀಮಾ ಕೋರೆಂಗಾವ್ ಕದನದ 208ನೇ ವರ್ಷದ ಪ್ರಯುಕ್ತ ವಿಜಯೋತ್ಸವ, ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮವು ಗುರುವಾರ ರಾತ್ರಿ ಬಜ್ಪೆ ಬಸ್ ನಿಲ್ದಾಣದ ಬಳಿ ನಡೆಯಿತು.
ದಿಕ್ಕೂಚಿ ಭಾಷಣಗೈದ ಜಾನಪದ ಮತ್ತು ಸಾಹಿತ್ಯ ವಿದ್ವಾಂಸರಾದ ಗಣನಾಥ ಶೆಟ್ಟಿ ಎಕ್ಕಾರು ಅವರು, ಭೀಮಾ ಕೋರೆಗಾಂವ್ ಕದನ ದಲಿತರ ಶಿಕ್ಷಣ, ಸ್ವಾಭೀಮಾನ, ಜಾತೀಯತೆಯ ವಿರುದ್ಧದ ಯುದ್ಧ. ಪೃಶ್ವೆಯರ ಕಾಲದಲ್ಲಿದ್ದ ಮನು ಸಿದ್ಧಾಂತ, ಜಾತೀವಾದ, ಜಾತಿ ಪದ್ಧತಿ ಈ ವರೆಗೂ ಪರಿಪೂರ್ಣವಾಗಿ ನಿಂತಿಲ್ಲ.
ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚಿನ ಡಿಗ್ರಿಗಳನ್ನು ಪಡೆದುಕೊಂಡಿದ್ದ ಅಂಬೇಡ್ಕರ್ ಅವರನ್ನೂ ಜಾತೀಯತೆ ಬಿಟ್ಟಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕೋರೇಗಾಂವ್ ಯುದ್ಧ ದೇಶದಲ್ಲಿ ಸಾರ್ವತ್ರಿಕ ಶಿಕ್ಣಣಕ್ಕೆ ಮುನ್ನುಡಿಯಾ ಯಿತು. ನಮ್ಮ ಯೋಚನೆ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸಬೇಕು ಎಂದು ಅವರು ನುಡಿದರು.
ಬಳಿಕ ಮಾತನಾಡಿದ ದ.ಕ. ಕೊರಗ ಸಮಾಜದ ಗುರಿಕಾರ ಬಾಲರಾಜ್ ಕೋಡಿಕಲ್ ಅವರು, ಕೊರಗ, ದಲಿತ ಸಮುದಾಯ ಅಸೃಶ್ಯತೆ, ದೌರ್ಜನ್ಯಗಳನ್ನು ಮೆಟ್ಟಿ ನಿಂತು 20 ವರ್ಷಗಳಾಗಿರಬಹುದು. ಅಸೃಸ್ಯತೆ ಈಗಲೂ ಇದೆ ಅದರ ರೂಪ ಮಾತ್ರ ಬದಲಾಗಿದೆ. ಭಾರತದ ಮೂಲ ನಿವಾಸಿಗಳಾದ ಕೊರಗ ಸಮುದಾಯ ಮತ್ತು ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜ್ಯದಗಳ ವಿರುದ್ಧ ಉತ್ತರ ನೀಡುವ ಸಮಯ ಖಂಡಿತಾ ಬರಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ದ.ಸಂ.ಸ. ಜಿಲ್ಲಾ ಸಂಚಾಲಕರಾದ ಸದಾಶಿವ ಪಡುಬಿದ್ರಿ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಯಮುನಾ ಕೋಟ್ಯಾನ್ ಉಪಸ್ಥಿತರಿದ್ದರು.
ದ.ಕನ್ನಡ ದ.ಸಂ.ಸ. ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸರೋಜಿನಿ ಬಂಟ್ವಾಳ, ದ.ಕ.ಜಿಲ್ಲಾ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಎಚ್.ಡಿ. ಲೋಹಿತ್, ಮಂಗಳೂರು ತಾಲೂಕು ಸಂಚಾಲಕ ರಾಘವೇಂದ್ರ ಎಸ್., ದ.ಕ. ಜಿಲ್ಲಾ ದಲಿತ ಕಲಾ ಮಂಡಳಿಯ ಸಂಚಾಲಕ ಕಮಲಾಕ್ಷ ಬಜಾಲ್, ಮಂಗಳೂರು ತಾಲೂಕು ಸಂಚಾಲಕ ಗಂಗಾಧರ ಸಾಲ್ಯಾನ್ ಕೊರಗ ಸಮುದಾಯ ಮುಖಂಡ ಸುಂದರ ಬೆಳುವಾಯಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ದ.ಕ. ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದ ಮೊಟ್ಟ ಮೊದಲ ವೈದ್ಯೆ ಡಾ. ಸ್ನೇಹಾ ಕೊರಗ ಕುಂದಾಪುರ ಇವರ ಸಾಧನೆಯನ್ನಯ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯೋತ್ಸವ ಪ್ರಯುಕ್ತ ಬಜ್ಪೆ ಕಿನ್ನಿಪದವುನಿಂದ ಬಜ್ಪೆ ಬಸ್ ನಿಲ್ದಾಣದ ವರೆಗೆ ಪಂಜುಗಳೊಂದಿಗೆ ಶಿಸ್ತುಬದ್ಧ ವಿಜಯೋತ್ಸವ ಪಂಜಿನ ಮೆರವಣಿಗೆ ನಡೆಯಿತು.
ಮೆರಣಿಗೆಯಲ್ಲಿ ಭೀಮಾ ಕೋರೆಂಗಾವ್ ವಿಜಯ ಸ್ತೂಪದ ಸ್ಥಬ್ಧಚಿತ್ರ, ಡೋಲು, ಕೊಳಲುವಾದನ, ಭೀಮಾ ಕೋರೆಂಗಾವ್ ವಿಜಯದ ಹಾಡುಗಳು, ಗೊಂಬೆ ಕುಣಿತ, ತಾಸೆಯಜೊತೆಗೆ ನೀಲಿ ಶಾಲುಗಳನ್ನು ಧರಿಸಿದ್ದ ನೂರಾರು ಮಂದಿ ಹೆಜ್ಜೆಹಾಕಿದರು.







