ಬಜ್ಪೆ | ಒಂದು ಕೆಜೆ ಗಾಂಜಾ ಸಹಿತ ಇಬ್ಬರು ಅಂತಾರಾಜ್ಯ ಆರೋಪಿಗಳ ಬಂಧನ

ಮಂಗಳೂರು: ಮಾದಕ ವಸ್ತು ಗಾಂಜಾವನ್ನು ಬಿಹಾರದಿಂದ ರೈಲು ಮೂಲಕ ಮಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಜ್ಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಖಗರಿಯಾ ನಿವಾಸಿ ಸುನೀಲ್ ಕುಮಾರ್(40) ಹಾಗೂ ಉತ್ತರ ಪ್ರದೇಶದ ಚುನಾರ್ ಮಿರ್ಝಾಪುರ್ ನಿವಾಸಿ ಬ್ರಿಜೇಶ್ ಶ್ರೀವಾಸ್ತವ್(42) ಬಂಧಿತ ಆರೋಪಿಗಳು. ಪ್ರಸಕ್ತ ಕೃಷ್ಣಾಪುರ ಕಾಟಿಪಳ್ಳದಲ್ಲಿ ವಾಸ್ತವ್ಯವಿದ್ದ ಇವರು ಶನಿವಾರ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲೆತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಅವರಿಬ್ಬರನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು ಒಂದು ಕೆಜಿ ತೂಕದ ಮಾದಕವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗಾಂಜಾವನ್ನು ಬಿಹಾರದಲ್ಲಿ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





