ಆ. 1ರಿಂದ ಕೇಂದ್ರೀಯ ವಿದ್ಯಾಲಯದಲ್ಲಿ ‘ಬಾಲವಟಿಕ’ ಜಾರಿ

ಮಂಗಳೂರು, ಜು. 28: ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆ ಜಾರಿಯಾಗಿ 3 ವರ್ಷ ಪೂರ್ಣವಾಗುತ್ತಿರುವಂತೆಯೇ ಕೇಂದ್ರೀಯ ವಿದ್ಯಾಲಯದಲ್ಲಿ ‘ಬಾಲವಟಿಕ’ ಎಂಬ ಶಿಕ್ಷಣ ಸ್ವರೂಪವನ್ನು ಆ.1ರಿಂದ ಜಾರಿಗೆ ತರಲಾಗುತ್ತಿದೆ ಎಂದು ಮಂಗಳೂರಿನ ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ-2ರ ಪ್ರಾಂಶುಪಾಲರಾದ ನರೇಂದ್ರ ಸಿಂಗ್ ಯಾದವ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಇದರ ಮೂರನೆಯ ವಾರ್ಷಿಕೋತ್ಸವದ ಅಂಗವಾಗಿ ಎಕ್ಕೂರಿನ ಕೇಂದ್ರೀಯ ವಿದ್ಯಾಲಯ-2 ರಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷ ಮೇಲ್ಪಟ್ಟ ಹಾಗೂ 6ರ ಒಳಗಿನ ವಿದ್ಯಾರ್ಥಿಗಳಿಗೆ ಈ ಕಲಿಕೆ ಅನ್ವಯವಾಗುತ್ತದೆ. 3 ಗಂಟೆಗಳ ಕಲಿಕೆಯಿದು. ಪಣಂಬೂರು-1 ಹಾಗೂ ಎಕ್ಕೂರು-2 ಕೇಂದ್ರೀಯ ವಿದ್ಯಾಲಯದಲ್ಲಿ ಇದು ಜಾರಿಗೆ ಬರುತ್ತಿದೆ ಎಂದರು.
ಎನ್‌ಇಪಿ ಅಡಿಯಲ್ಲಿ ವಿದ್ಯಾಂಜಲಿ ಎಂಬ ಯೋಜನೆಯಿದ್ದು, ಇದರಂತೆ ವಿವಿಧ ಕ್ಷೇತ್ರದ ಕೈಗಾರಿಕಾ ಅಥವಾ ನುರಿತರು ವಿವಿಧ ವಿಚಾರಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲು ಅವಕಾಶವಿದೆ ಎಂದವರು ಹೇಳಿದರು.
ಕಲಿಕೆ ಎಂಬುದು ಸಮಗ್ರವಾದ ಸಂತೋಷ ನೀಡುವಂತಹ ಕ್ರಿಯಾಶೀಲತೆಯನ್ನು ಉದ್ದೇಪಿಸುವಂತಹ ಚಟುವಟಿಕೆಯಾಗಿರಬೇಕು. ಇದುವೇ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯ ಎಂದವರು ವಿಶ್ಲೇಷಿಸಿದರು.
ಮುಡಿಪು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಿ. ರಾಜೇಶ್ ಅವರು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಶಿಕ್ಷಣದ ಗುಣಮಟ್ಟದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ ಎಂದರು.
ಶಾಲೆಯ ಹಿರಿಯ ಪ್ರಾಥಮಿಕ ಶಿಕ್ಷಕಿ ಶೀಜಾ ನಂಬಿಯಾರ್ ಅವರು ಶಾಲೆಯ ಚಟುವಟಿಕೆಗಳ ಕುರಿತು ವಿವರಿಸಿದರು. ಮಣಿಪಾಲ್ ವಿದ್ಯಾಲಯದ ಪ್ರಾಂಶುಪಾಲರಾದ ಅನುರಾಧ ಶಿವರಾಂ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲೆಯ ಸಿಬಿಎಸ್‌ಇ ಮತ್ತು ಇತರೆ ವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. ಸ್ನಾತಕೋತ್ತರ ಶಿಕ್ಷಕಿ ಬಿಂದು ಭಾಸ್ಕರ್ ನಿರೂಪಿಸಿದರು. ಹಿರಿಯ ಸ್ನಾತಕೋತ್ತರ ಶಿಕ್ಷಕ ಪ್ರತೀಶ್ ಸಿ.ಪಿ. ವಂದಿಸಿದರು.







