ಸೈಬರ್ ವಂಚಕರ ಬಲೆಗೆ ಸಿಲುಕಿದ್ದ ಬ್ಯಾಂಕ್ ಗ್ರಾಹಕ-ವೈದ್ಯರಿಗೆ ರಕ್ಷಣೆ

ಮಂಗಳೂರು: ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ್ದ ವೃತ್ತಿಯಲ್ಲಿ ವೈದ್ಯರಾಗಿದ್ದ ಬ್ಯಾಂಕ್ ಗ್ರಾಹಕರೊಬ್ಬರು ಮತ್ತಷ್ಟು ಹಣವನ್ನು ಕಳೆದುಕೊಳ್ಳುವುದನ್ನು ಮಂಗಳೂರು ಸೆನ್ ಪೊಲೀಸರು ತಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಎರಡು ಮೂರು ದಿನಗಳಿಂದ ಕೆಲವು ಖಾತೆಗಳಿಗೆ ಹಣ ಠೇವಣಿ ಮಾಡಲು ಬರುತ್ತಿದ್ದ ವೈದ್ಯರ ಬಗ್ಗೆ ಸಂಶಯಗೊಂಡ ಬ್ಯಾಂಕ್‌ನ ಅಧಿಕಾರಿಗಳು ಸೆನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ವೈದ್ಯರನ್ನು ಪೊಲೀಸರು ವಿಚಾರಿಸಿದಾಗ ಸೈಬರ್ ವಂಚನೆಗೆ ಒಳಪಟ್ಟು ಸುಮಾರು 22 ಲಕ್ಷ ರೂ.ಗಳಿಗೂ ಅಧಿಕ ಹಣ ಕಳೆದುಕೊಂಡಿರುವುದು ತಿಳಿದು ಬಂತು. ಶನಿವಾರ ಮತ್ತೆ ಸುಮಾರು 3 ಲಕ್ಷ ರೂ. ಠೇವಣಿ ಮಾಡಲು ಬ್ಯಾಂಕ್ ಶಾಖೆಗೆ ವೈದ್ಯರು ಭೇಟಿ ನೀಡಿದ್ದರು. ಆ ಸಂದರ್ಭ ಪೊಲೀಸ್ ಅಧಿಕಾರಿಗಳು ಹಣ ಠೇವಣಿ ಮಾಡದಂತೆ ವೈದ್ಯರಿಗೆ ಜಾಗೃತಿ ಮೂಡಿಸಿ ಧೈರ್ಯ ತುಂಬಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದ ಈ ವೈದ್ಯರಿಗೆ ವಿದೇಶದಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ ಯುಎಸ್ ಡಾಲರ್ ನಲ್ಲಿ 25 ಲಕ್ಷ ರೂ. ನಿಮ್ಮ ಸಮಾಜ ಕಾರ್ಯಕ್ಕೆ ಕಳುಹಿಸಿಕೊಡುತ್ತೇವೆ ಎಂದು ನಂಬಿಸಿದ್ದ. ಆ ಬಳಿಕ ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿಗಳು ಎಂದು ಕರೆ ಮಾಡಿದ ವ್ಯಕ್ತಿ ನಿಮಗೆ ಪಾರ್ಸಲ್ ಬಂದಿದ್ದು, ಅದನ್ನು ಪಡೆಯಲು ಕಸ್ಟಮ್ಸ್ ಶುಲ್ಕ ಪಾವತಿಸಬೇಕು ಎಂದಿದ್ದ. ಅದನ್ನು ನಂಬಿದ ವೈದ್ಯರು ಹಂತ ಹಂತವಾಗಿ ಅಪರಿಚಿತರು ಹೇಳಿದ ವಿವಿಧ ಖಾತೆಗಳಿಗೆ ಹಣ ಪಾವತಿಸಿದ್ದರು ಎಂದು ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
‘ನಾವು ಇತ್ತೀಚೆಗೆ ಬ್ಯಾಂಕರ್‌ಗಳ ಸಭೆಯನ್ನು ಕರೆದು, ಸಂಭಾವ್ಯ ಸೈಬರ್ ವಂಚನೆಗಳನ್ನು ಗುರುತಿಸಲು ಮತ್ತು ಗ್ರಾಹಕರನ್ನು ರಕ್ಷಿಸಲು ಬ್ಯಾಂಕ್‌ಗಳಲ್ಲಿ ಗ್ರಾಹಕರಿಂದ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ನಿಗಾ ಇರಿಸುವಂತೆ ಕೋರಿಕೊಂಡಿದ್ದೆವು. ಅದರಂತೆ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಮಾಹಿತಿ ನೀಡಿದ ಮೇರೆಗೆ ಸೈಬರ್ ವಂಚನೆಗೆ ಒಳಗಾಗಿದ್ದ ಗ್ರಾಹಕರೊಬ್ಬರು ಮತ್ತಷ್ಟು ಹಣವನ್ನು ಕಳೆದುಕೊಳ್ಳುವುದರಿಂದ ರಕ್ಷಿಸಲಾಗಿದೆ. ಪ್ರಕರಣದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.







