ಬಂಟ್ವಾಳ: ಕಾರು ಢಿಕ್ಕಿ; ವಾಹನ ದುರಸ್ತಿ ಮಾಡುತ್ತಿದ್ದ ಯುವಕ ಮೃತ್ಯು

ಬಂಟ್ವಾಳ : ಹೆದ್ದಾರಿ ಬದಿಯಲ್ಲಿ ಕಾರಿಗೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಅಟೋ ಇಲೆಕ್ಟ್ರಿಕಲ್ ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ಗಾಣದಪಡ್ಪು ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಮೃತ ಅಟೋ ಇಲೆಕ್ಟ್ರಿಕಲ್ ಕಾರ್ಮಿಕನನ್ನು ಕೊಳ್ನಾಡು ಗ್ರಾಮದ ಮರಕಡಬೈಲು ನಿವಾಸಿ ಬಾರೆಬೆಟ್ಟು ಅಬ್ಬಾಸ್ ಎಂಬವರ ಪುತ್ರ ಅಬ್ದುಲ್ ಜಬ್ಬಾರ್ (27) ಎಂದು ಗುರುತಿಸಲಾಗಿದೆ.
ಗಾಣದಪಡ್ಪುವಿನ ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಅಟೋ ಇಲೆಕ್ಟ್ರಿಕಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಜಬ್ಬಾರ್ ಮಂಗಳವಾರ ಎಂದಿನಂತೆ ಕಾರೊಂದಕ್ಕೆ ಹೆದ್ದಾರಿ ಬದಿಯಲ್ಲಿ ಹಾರ್ನ್ ಅಳವಡಿಸುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯ ಗೊಂಡ ಜಬ್ಬಾರ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Next Story





