ಬಂಟ್ವಾಳ | ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಬಂಟ್ವಾಳ, ನ. 22 : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ, ಕಡೇಶಿವಾಲಯ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರ ಇದರ ಕ್ಯಾಂಪಸ್ ನಲ್ಲಿ ಇತ್ತೀಚೆಗೆ, ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಇರುವ ಒಟ್ಟು ಹದಿನೈದು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ಸಡಗರದಿಂದ ಜರುಗಿತು.
ಕರ್ನಾಟಕದ ಸರಕಾರದ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಜರುಗುವ ಈ ಕಾರ್ಯಕ್ರಮವನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳ ಸಹಭಾಗಿತ್ವದಲ್ಲಿ ಇಲ್ಲಿನ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ ಕಳೆದ, ನ.6ರ, 2025ರಂದು ಶನಿವಾರ ಆಯೋಜಿಸಲಾಗಿತ್ತು.
ಪರಿಸರ ಸಂರಕ್ಷಣೆಯ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ, ಸಸಿಗೆ ನೀರೆರೆಯುವ ಮೂಲಕ, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷೆಯವರಾದ, ಭಾರತಿ ಅವರು ಸಮಾರಂಭಕ್ಕೆ ಚಾಲನೆಯನ್ನು ನೀಡಿದರು.
ಬಳಿಕ ಸುಧಾಕರ್ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಆಮಿನಾ ಬಾನು ಅವರು ಅತಿಥಿ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು, ಕೊನೆಯಲ್ಲಿ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ರವರ ಅಧ್ಯಕ್ಷೀಯ ಭಾಷಣದ ಬಳಿಕ ಸಹ ಶಿಕ್ಷಕಿಯವರಾದ ಕುಮಾರಿ ನಿಖಿತಾರವರು ಧನ್ಯವಾದವಿತ್ತರು ಹಾಗೂ ಸಹ ಶಿಕ್ಷಕ ಹೈದರ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಸುರೇಶ್ ಪೂಜಾರಿ, ಸತೀಶ್ ರಾವ್, ಗುರುರಾಜ್ ಪಾಟ್ರಕೋಡಿ, ರಾಜೇಶ್ವರಿ, ಝಕರಿಯಾ ದಾರಿಮಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.
ಸಾಯಂಕಾಲ ಕೈಗೊಳ್ಳಲಾದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಕಲ್ಲಾಜೆ, ಅಲ್ತಾಫ್ ದಾರಿಮಿ ಖತೀಬರು ಹಯಾತುಲ್ ಇಸ್ಲಾಮ್ ಜುಮಾ ಮಸೀದಿ ಪೆರ್ಲಾಪು ಮತ್ತು ಅಧ್ಯಾಪಕರು ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ, ಸಹಕರಿಸಿದ ಎಲ್ಲಾ ಶಾಲೆಗಳ ಅಧ್ಯಾಪಕ ವೃಂದವನ್ನು ಶ್ಲಾಘಿಸಿ, ವಿಜೇತ ವಿದ್ಯಾರ್ಥಿಗಳನ್ನು, ಅಭಿನಂದಿಸಿದ, ಶಾಲಾ ಸಂಚಾಲಕ ಶ್ರೀಯುತ ಅಬ್ದುಲ್ ಖಾದರ್ ಕುಕ್ಕಾಜೆ ಸಾಂದರ್ಭಿಕ ನುಡಿಗಳನ್ನಾಡಿದರು. ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ರಿಯಾಝ್ ಕಲ್ಲಾಜೆಯವರು ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಸಹ ಶಿಕ್ಷಕಿಯವರಾದ ಮುಬೀನಾ ಶುಭಾನ್ ಆರಂಭದಲ್ಲಿ ಸ್ವಾಗತ ಕೋರಿ, ಕೊನೆಯಲ್ಲಿ ಧನ್ಯವಾದವಿತ್ತರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ, ಒಟ್ಟು ಏಳು ಪ್ರಶಸ್ತಿಗಳನ್ನು ಪಡೆದು ಕೆದಿಲ ಕ್ಲಸ್ಟರ್ ಮಟ್ಟದ ಚಾಂಪಿಯನ್, ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ ತನ್ನದಾಗಿಸಿಕೊಂಡಿತು. ಒಟ್ಟು ಐದು ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕೆದಿಲ ದ್ವಿತೀಯ ಸ್ಥಾನವನ್ನು ಗಳಿಸಿತು. ದ.ಕ. ಹಿರಿಯ ಪ್ರಾಥಮಿಕ ಶಾಲೆ, ಪಾಟ್ರಕೋಡಿ ನಾಲ್ಕು ಪ್ರಶಸ್ತಿಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆಯಿತು.
ವಿಜೇತರೆಲ್ಲರಿಗೂ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ಕ್ಲಸ್ಟರ್ ಮಟ್ಟದ ಈ ಸ್ಪರ್ಧೆಯಲ್ಲಿ, ಕಡೇಶಿವಾಲಯ ಕ್ಲಸ್ಟರ್ ಉಸ್ತುವಾರಿಯನ್ನು, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇಲ್ಲಿನ ಸಹ ಶಿಕ್ಷಕಿಯಾದ ಸಿನಾನ ವಹಿಸಿಕೊಂಡರು ಹಾಗೂ ಅಲಿಮತ್ ಸಅದಿಯ ಸಹ ಶಿಕ್ಷಕಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಅವರು ಕೆದಿಲ ಕ್ಲಸ್ಟರ್ ಗೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.







