ಬಂಟ್ವಾಳ : ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯ ರಕ್ಷಣೆ

ಬಂಟ್ವಾಳ : ಬೇಲಿಗೆ ಹಾಕಲಾಗಿದ್ದ ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ರಕ್ಷಣೆ ಮಾಡಿದ ಘಟನೆ ಪಿಲಾತಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.
ಪಿಲಾತಬೆಟ್ಟು ಗ್ರಾಮದ ನಿನ್ಯಾಲು ಎಂಬಲ್ಲಿ ತಡೆ ಬೇಲಿಗೆ ಹಾಕಲಾದ ಕಬ್ಬಿಣದ ತಂತಿಯಲ್ಲಿ ಸಿಲುಕಿಕೊಂಡು ಹೋಗಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಚಿರತೆಯನ್ನು ಗುರುವಾರ ಬೆಳಿಗ್ಗೆ ಸುಮಾರು 9.30 ಗಂಟೆಗೆ ನೋಡಿದ ಗ್ರಾಮಸ್ಥರು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಇಲಾಖೆಯ ಅಧಿಕಾರಿಗಳು ಪಿಲಿಕುಲದ ವೈದ್ಯಾಧಿಕಾರಿ ಯಶಸ್ವಿ ನಾರವಿ ಅವರು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು.
ಬಳಿಕ ತಂತಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಬಿಡಿಸಿಕೊಂಡು, ಸುರಕ್ಷಿತವಾಗಿ ಪಂಜರದೊಳಗೆ ಹಾಕಿ ವೇಣೂರು ಅರಣ್ಯ ಇಲಾಖೆಗೆ ಕೊಂಡುಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸುಮಾರು ಒಂದುವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಆರೋಗ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಎ.ಸಿ.ಎಫ್.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಭರತ್ , ಉಪ ವಲಯ ಅರಣ್ಯಾಧಿಕಾರಿ ಸುನಿಲ್, ಗಸ್ತು ಅರಣ್ಯ ಪಾಲಕರಾದ ದಿವಾಕರ ಮತ್ತು ದಿನೇಶ್ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.







