ಬಂಟ್ವಾಳ | ಪುದು ಗ್ರಾಮ ಪಂಚಾಯತ್ ನಿಂದ ತ್ಯಾಜ್ಯ ಎಸೆದ ವ್ಯಕ್ತಿಗೆ 3,000 ರೂ. ದಂಡ

ಬಂಟ್ವಾಳ : ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೆಮಾರ್ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯಲು ಮುಂದಾದ ವ್ಯಕ್ತಿಯಿಂದ ಪಂಚಾಯತ್ ಮೂರು ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.
ಪುದು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ರಮ್ಲಾನ್ ಮಾರಿಪಳ್ಳ ಅವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಥಮ ಸಭೆಯಲ್ಲೇ ನಿರ್ಣಯ ಕೈಗೊಂಡಿದ್ದರು. ಅದೂ ಅಲ್ಲದೆ ಕಸ ಎಸೆಯುವವರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದವರಿಗೆ ಒಂದು ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು.
ಅಮೆಮಾರ್ ಎಂಬಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವವರು ತಡರಾತ್ರಿ ತ್ಯಾಜ್ಯವನ್ನು ಎಸೆಯಲು ಬಂದಾಗ ಸ್ಥಳೀಯರು ತಡೆದು ಕಸ ಎಸೆದವರ ಮಾಹಿತಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ರವರಿಗೆ ತಿಳಿಸಿದ್ದರು. ಅಧ್ಯಕ್ಷರು ಪೋಲಿಸರ ಸಹಕಾರದೊಂದಿಗೆ ಮಾಹಿತಿ ಕಲೆ ಹಾಕಿ ಅದರಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಸ್ಮೃತಿ ಯು., ಅವರು ಕಸ ಎಸೆಯಲು ಬಂದವರಿಂದ 3,000 ರೂ. ದಂಡವನ್ನು ವಸೂಲಿ ಮಾಡಿ ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ ಎಂದು ಪುದು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.







