ಬಂಟ್ವಾಳ | ಅಕ್ಕಿ ಸಾಗಾಟದ ಲಾರಿ ಪಲ್ಟಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಬಂಟ್ವಾಳ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತ ಕಾರ್ಮಿಕರನ್ನು ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸಾತ್(32) ಎಂದು ಗುರುತಿಸಲಾಗಿದೆ. ಆದರ್ಶ್ ಎಂಬವರು ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವ ಕಾರ್ಮಿಕ.
ನಿರ್ಮಲಾ ಅನ್ಸಾತ್ ಹಾಗೂ ಆದರ್ಶ್ ಲಾರಿಯ ಹಿಂಬದಿಯಲ್ಲಿ ಅಕ್ಕಿ ಲೋಡ್ ಮೇಲೆ ಕುಳಿತುಕೊಂಡಿದ್ದರೆನ್ನಲಾಗಿದೆ. ಅಪಘಾತದ ವೇಳೆ ರಸ್ತೆಗೆ ಎಸೆಯಲ್ಪಟ್ಟು ನಿರ್ಮಲಾ ಅನ್ಸಾತ್ ಮೃತಪಟ್ಟರೆ, ಆದರ್ಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ ಚಾಲಕ ಸುಜಿತ್ ಹಾಗೂ ಕ್ಲೀನರ್ ಸಿಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡುಬಿದಿರೆ ಮಾರ್ಗವಾಗಿ ಬಂಟ್ವಾಳಕ್ಕೆ ಬರುತ್ತಿದ್ದ ಲಾರಿ ಬಂಟ್ವಾಳದ ಎಸ್.ವಿ.ಎಸ್. ಕಾಲೇಜು ಬಳಿ ಅತಿಯಾದ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.