ಬಂಟ್ವಾಳ | ಹರಿಕೃಷ್ಣ ಪುನರೂರು, ಬಿ.ರಮಾನಾಥ ರೈಗೆ ಸನ್ಮಾನ

ಬಂಟ್ವಾಳ : ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈಯವರು ಜಿಲ್ಲೆಯ ಮೇರು ವ್ಯಕ್ತಿತ್ವದ ಸಾಧಕರಿಬ್ಬರ ವ್ಯವಹಾರಿಕ ಕ್ಷೇತ್ರ ವಿಭಿನ್ನವಾದರೂ ಜನಸೇವೆಯ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳವರು ನುಡಿದರು.
ಬಿ.ಸಿ.ರೋಡ್ ನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ಧರ್ಮದರ್ಶಿ, ಕಸಾಪ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅರ್ಶೀವಚನಗೈದ ಅವರು, ಗುರುಗಳ ಕಾಲದಿಂದಲು ಮಠದ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಇವರಿಬ್ಬರು ಯಕ್ಷಗಾನ ಸಹಿತ ಸಾಂಸ್ಕೃತಿಕವಾಗಿಯೂ ಅಭಿಮಾನವುಳ್ಳವರಾಗಿದ್ದಾರೆ. ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನೀಡುವ ಇವರ ಜನಸೇವೆ ಸಮಾಜವನ್ನು ಒಂದುಗೂಡಿಸುವಂತಾಗಿದೆ ಎಂದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕುರಿತು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕುರಿತು ಅಭಿನಂದನಾ ಭಾಷಣಗೈದರು.
ಸನ್ಮಾನ ಸ್ವೀಕರಿಸಿದ ಹರಿಕೃಷ್ಣ ಪುನರೂರು ಮಾತನಾಡಿ, ತಾನು ಸಂಪಾದನೆಯ ಒಂದು ಭಾಗವನ್ನು ಬಡವರ ಸೇವೆಗಾಗಿ ಸಮರ್ಪಿಸಿದ್ದೆನೆ. ಭಾಷಣ ಮಾಡುವ ಬದಲು ಕೆಲಸ ಮಾಡುವುದು ಮುಖ್ಯ. ಪ್ರತಿಯೋರ್ವರು ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಜನಸೇವೆಗಾಗಿ ಸಿಕ್ಕಿರುವ ಅವಕಾಶವನ್ನು ಕರ್ತವ್ಯದ ಭಾಗವಾಗಿ ಮಾಡಿದ್ದೇನೆ. ಎಲ್ಲಾ ಧರ್ಮಿಯರನ್ನು ಪ್ರೀತಿ, ವಿಶ್ವಾಸದಿಂದ ಕಂಡು ಕೆಲಸ ಮಾಡಿರುವ ತೃಪ್ತಿ ಹೊಂದಿದ್ದೆನೆ. ಶ್ರೀ ರಾಮನ ಆದರ್ಶಕ್ಕನುಗುಣವಾಗಿ ಇದುವರೆಗೂ ತನ್ನ ಬದುಕನ್ನು ಸಾಗಿಸಿದ್ದೆನೆ ಎಂದರು.
ಅಭಿನಂದನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅವರು ಸಭಾಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಯಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದ.ಕ.ಜಿಲ್ಲೆ-1 ರ ನಿರ್ದೇಶಕ ದಿನೇಶ್, ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಉದ್ಯಮಿ ರಘುನಾಥ ಸೋಮಯಾಜಿ, ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ ಅವರು ಮಾತನಾಡಿ ಶುಭಹಾರೈಸಿದರು.
ಇದೇ ವೇಳೆ ಇದೇ ವೇಳೆ "ಪ್ರಶಂಸಾ" ಅಭಿನಂದನಾ ಗ್ರಂಥ ವನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಕೋಶಾಧಿಕಾರಿ ರಾಮ್ ಗಣೇಶ್ ಕೈಕುಂಜೆ, ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕ ಪ್ರೋ.ರಾಜಮಣಿ ರಾಮಕುಂಜ ಅವರು ವೇದಿಕೆಯಲ್ಲಿದ್ದರು. ಅಭಿನಂದನಾ ಸಮಿತಿಯ ಮಹಾಲಿಂಗ ಭಟ್ ಹಾಗೂ ಜಯರಾಮ ಪೂಜಾರಿ ಅವರು ಅಭಿನಂದನಾ ಪತ್ರ ವಾಚಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ವಂದಿಸಿದರು. ರಂಗ ಕಲಾವಿದ ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸನ್ಮಾನಿತರಿಬ್ಬರಿಗೂ ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು. ಸಮಾರಂಭಕ್ಕೂ ಮುನ್ನ ಮಹಾಗಣಪತಿ ಹೋಮ, ಮಧ್ಯಾಹ್ನ ಭೋಜನದ ಬಳಿಕ ಜಯಪ್ರಕಾಶ್ ಪೆರ್ಮುದೆ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ "ಶಾಂಭವಿ ವಿಜಯ" ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.







