ಬಾಲಕ ದಿಗಂತ್ ಶೀಘ್ರ ಪತ್ತೆಗೆ ಆಗ್ರಹ: ಅಮೆಮ್ಮಾರ್ ಮಸೀದಿ ನಿಯೋಗದಿಂದ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ

ಫರಂಗಿಪೇಟೆ: ಕಳೆದೊಂದು ವಾರದಿಂದ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟುವಿನ ಬಾಲಕ ದಿಗಂತ್ ಶೀಘ್ರ ಪತ್ತೆಗೆ ಒತ್ತಾಯಿಸಿ ಅಮೆಮ್ಮಾರ್ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿ ನಿಯೋಗವು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಪಿಯು ಕಾಲೇಜು ವಿದ್ಯಾರ್ಥಿ ದಿಗಂತ್ ಫೆ.25ರಿಂದ ನಾಪತ್ತೆಯಾಗಿದ್ದು, 7 ದಿನಗಳೇ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಅವರ ಕುಟುಂಬ ಆತಂಕದಲ್ಲಿದೆ. ಇದೇ ವಿಚಾರವನ್ನು ಮುಂದಿಟ್ಟು ಗೊಂದಲ ಸೃಷ್ಟಿಸುವ ಪ್ರಯತ್ನಗಳಾಗುತ್ತಿದೆ. ಅಂತಹ ಯಾವುದೇ ಪ್ರಚೋದನಾತ್ಮಕ ಕ್ರಮಕ್ಕೆ ಅವಕಾಶ ನೀಡಬಾರದು. ಶೀಘ್ರವೇ ದಿಗಂತ್‌ನನ್ನು ಪತ್ತೆ ಹಚ್ಚಿ ನೋವಿನಲ್ಲಿರುವ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ನಿಯೋಗದಲ್ಲಿ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬೂಸ್ವಾಲಿಹ್ ಉಸ್ತಾದ್, ಪ್ರಧಾನ ಕಾರ್ಯದರ್ಶಿ ಶಾಫಿ ಅಮೆಮ್ಮಾರ್, ಕಾರ್ಯದರ್ಶಿ ಹೈದರ್ ಅಮೆಮ್ಮಾರ್, ಬಶೀರ್ ತಂಡೇಲ್ ಮತ್ತಿತರರು ನಿಯೋಗದಲ್ಲಿದ್ದರು.
ಬಾಲಕ ನಾಪತ್ತೆ ಪ್ರಕರಣ ಭೇದಿಸಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ತನಿಖೆಗೆ ಏಳು ಸಬ್ ಇನ್‌ಸ್ಪೆೆಕ್ಟರ್‌ಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಶೀಘ್ರವೇ ಪ್ರಕರಣವನ್ನು ಭೇದಿಸುವ ಭರವಸೆ ಇದೆ.
-ಯತೀಶ್ ಎನ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ