ಬಿಸಿ ರೋಡ್ನಿಂದ ಸುರತ್ಕಲ್ ಚತುಷ್ಪಥದಿಂದ ಷಟ್ಪಥ: ಎನ್ಎಚ್ಎಐನಿಂದ ಡಿಪಿಆರ್ಗೆ ಸಿದ್ಧತೆ

ಸಾಂದರ್ಭಿಕ ಚಿತ್ರ
ಮಂಗಳೂರು, ಜ.14: ನಗರದಲ್ಲಿ ಸುಗಮ ವಾಹನ ಸಂಚಾರವನ್ನು ಸುಗಮಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಬಿ.ಸಿ.ರೋಡ್ನಿಂದ ಸುರತ್ಕಲ್ನ ನಡುವಿನ 35 ಕಿ.ಮೀ. ವ್ಯಾಪ್ತಿಯ ಬಂದರು ಸಂಪರ್ಕ ರಸ್ತೆಯನ್ನು ಚತುಷ್ಪಥದಿಂದ ಷಟ್ಪಥಗೊಳಿಸಲು ಮುಂದಾಗಿದೆ. ಸರ್ವಿಸ್ ರಸ್ತೆಗಳೊಂದಿಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಜತೆಗೆ ಕುಂದಾಪುರ-ಸುರತ್ಕಲ್, ಹಾಗೂ ನಂತೂರು-ತಲಪಾಡಿ ಈ ಹೆದ್ದಾರಿ ಭಾಗಗಳನ್ನು ಸುಧಾರಣೆಗೊಳಿಸುವುದಕ್ಕಾಗಿ ಸಾಧ್ಯತಾ ವರದಿ ಸಿದ್ಧಪಡಿಸುವಂತೆ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಈ ಸಾಧ್ಯತಾ ವರದಿಗೆ ಸದ್ಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಕುಂದಾಪುರ- ತಲಪಾಡಿ 700 ಕೋ.ರೂ ಹಾಗೂ ಸುರತ್ಕಲ್-ಬಿ.ಸಿ.ರೋಡ್ 400 ಕೋ.ರೂ. ಯೋಜನೆ ಸಿದ್ಧಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಈ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಿರಂತರ ವಾಗಿ ಭೇಟಿ ಹಾಗೂ ಮನವಿ ಪತ್ರಗಳ ಮೂಲಕ ಸುರತ್ಕಲ್- ನಂತೂರು- ಬಿ.ಸಿ.ರೋಡ್ ಹೆದ್ದಾರಿ ವ್ಯಾಪ್ತಿಯನ್ನು ಎನ್ಎಚ್ಎಐಗೆ ಹಸ್ತಾಂತರಿಸಲು ಒತ್ತಾಯಿಸಿ ಇದಕ್ಕೆ ಕಳೆದ ಅಕ್ಟೋಬರ್ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿರುವ ಬೆನ್ನಲ್ಲೇ ಇದೀಗ ಈ ಹೆದ್ದಾರಿ ರಸ್ತೆಗಳ ಷಟ್ಪಥ ಕಾರ್ಯ ಸಾಧ್ಯತೆಯ ಬಗ್ಗೆಯೂ ಪ್ರಕ್ರಿಯೆಗಳು ನಡೆದಿವೆ.
ಹೆದ್ದಾರಿ ಸಚಿವಾಲಯವು ಪ್ರಾಧಿಕಾರಕ್ಕೆ ಸುರತ್ಕಲ್- ಬಿ.ಇಸರೋಡ್ ಹೆದ್ದಾರಿ ಸುಧಾರಣೆ ಹಾಗೂ ರಸ್ತೆ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಸೂಚಿಸಿದ್ದು, ಈ ಸಂಬಂಧ ಪ್ರಾಧಿಕಾರವು ಖಾಸಗಿ ಕನ್ಸಲ್ಟೆನ್ಸಿ ಏಜೆನ್ಸಿ ಮೂಲಕ ಡಿಪಿಆರ್ಗೆ ಮುಂದಾಗಿದೆ.
ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಇರುವ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡು 20 ವರ್ಷಗಳಾಗಿವೆ. ಈಗ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿರುವುದಲ್ಲದೆ, ಸರ್ವಿಸ್ ರಸ್ತೆಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ ಪ್ರಾಧಿಕಾರದ್ದಾಗಿದೆ.
ಪ್ರಾಥಮಿಕ ಮಾಹಿತಿಯನ್ನಷ್ಟೇ ಸದ್ಯ ಹೆದ್ದಾರಿ ಪ್ರಾಧಿಕಾರ ಹೊಂದಿದ್ದು, ವಿಸ್ತೃತ ತಾಂತ್ರಿಕ ವಿವರಗಳನ್ನು ಕಾರ್ಯ ಸಾಧ್ಯತಾ ವರದಿಯಲ್ಲಿ ಕನ್ಸಲ್ಟೆನ್ಸಿಯವರು ನೀಡಲಿದ್ದಾರೆ. ಧ್ರುವ ಕನ್ಸಲ್ಟೆನ್ಸಿ ಎಂಬ ಸಂಸ್ಥೆಯನ್ನು ಡಿಪಿಆರ್ ಮಾಡುವುದಕ್ಕಾಗಿ ಅಂತಿಮಗೊಳಿಸಲಾಗಿದೆ. ಇವರು ಕುಂದಾಪುರ-ತಲಪಾಡಿ ಡಿಪಿಆರ್ ಮಾಡಲಿದ್ದು, ಸುರತ್ಕಲ್-ಬಿ.ಸಿ.ರೋಡ್ ಕೂಡಾ ನಿರ್ವಹಿಸುವ ಸಾಧ್ಯತೆ ಇದೆ.
ಪ್ರಸ್ತುತ ತಲಪಾಡಿ-ಕುಂದಾಪುರ ಹೆದ್ದಾರಿ ಭಾಗದಲ್ಲಿ ಹೊಸದಾಗಿ ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಕಲ್ಲಾಪುವಿನಲ್ಲಿ ನೂತನ ಫ್ಲೈಓವರ್ ನಿರ್ಮಿಸುವ ಬಗ್ಗೆ ಯೋಜನೆ ಇದೆ.
ನವಮಂಗಳೂರು ಬಂದರು ಸಂಪರ್ಕದ ಹೆದ್ದಾರಿ ರಸ್ತೆ ಮತ್ತು ಬೈಪಾಸ್ ಹೆದ್ದಾರಿ ರಸ್ತೆಗಳ ಅಗಲೀಕರಣ ಚಟುವಟಿಕೆ ಗಳಿಗೆ ಸಂಬಂಧಿಸಿ ಡಿಪಿಆರ್ ಸಿದ್ಧಪಡಿಸುವಂತೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಏಜೆನ್ಸಿಯನ್ನು ಅಂತಿಮ ಗೊಳಿಸಲಾಗುವುದು. ಹೆದ್ದಾರಿಯನ್ನು 45 ಮೀಟರ್ಗೆ ಅಗಲಗೊಳಿಸಲು ಅಗತ್ಯವಾದ ಭೂಮಿಯನ್ನು ಎನ್ಎಚ್ಎಐ ಈಗಾಗಲೇ ಹೊಂದಿದೆ ಎಂದು ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ತಿಳಿಸಿದ್ದಾರೆ.
ನವ ಮಂಗಳೂರು ಬಂದರು ರಸ್ತೆಗೆ ಸಂಬಂಧಿಸಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಅಂದಾಜು 34 ಕೋಟಿ ರೂ. ವೆಚ್ಚದಲ್ಲಿ ಮಂಜೂರಾಗಿದ್ದ ಕೆಪಿಟಿ- ನಂತೂರು ನಡುವಿನ ಮೇಲ್ಸೇತುವೆ ಗುತ್ತಿಗೆಯನ್ನು ಪಾಧಿಕಾರ ಸದ್ಯ ಕೈಗೆತ್ತಿಕೊಳ್ಳುತ್ತಿಲ್ಲ. ಅದೇ ರೀತಿ, ನಂತೂರು ವೃತ್ತದಲ್ಲಿ ಸುಮಾರು 51 ಕೋಟಿ ರೂ. ವೆಚ್ಚದ ಪ್ರಸ್ತಾವಿತ ಗ್ರೇಡ್ ಸಪರೇಟರ್ ಕಾಮಗಾರಿಯನ್ನೂ ಪ್ರಾಧಿಕಾರ ಸದ್ಯ ನಡೆಸುತ್ತಿಲ್ಲ. ನಂತೂರು ಮತ್ತು ಕೆಪಿಟಿ ವೃತ್ತದಲ್ಲಿ ನಡೆಯುತ್ತಿರುವ ಸರ್ವಿಸ್ ರಸ್ತೆಗಳ ಬಳಿಕ ಈ ಕಾಮಗಾರಿ ಕೊನೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತೂರು ಬಳಿ ಎಲ್ಲಾ ದಿಕ್ಕುಗಳಲ್ಲೂ ಈಗಾಗಲೇ ಎಡಕ್ಕೆ ಮುಕ್ತ ಸಂಚಾರಕ್ಕಾಗಿ ರಸ್ತೆಗಳ ಅಗಲೀಕರಣ ಕಾರ್ಯವನ್ನು ಪ್ರಾಧಿಕಾರದಿಂದ ನಡೆಸಲಾಗಿದೆ.
ಕೂಳೂರು-ನಂತೂರು ಎಲಿವೇಟೆಡ್ ಕಾರಿಡಾರ್?
ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಸದ್ಯ ಕ್ಯಾರೇಜ್ ವೇ 23-24 ಮೀಟರ್ ಅಷ್ಟೇ ಇದೆ. ಈ ಭಾಗದ ಹೆದ್ದಾರಿ ಮೇಲೆ ತೀರಾ ಒತ್ತಡವಿರುವುದರಿಂದ 45 ಮೀಟರ್ ಗೆ ಅಗಲಗೊಳಿಸಿ, ಷಟ್ಪಥಗೊಳಿಸುವ ಉದ್ದೇಶ ಹೊಂದಲಾಗಿದೆ. 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ ಫ್ಲೈಓವರ್ಗಳನ್ನು ಯಾವ ರೀತಿಯಲ್ಲಿ ಮರುವಿನ್ಯಾಸ ಮಾಡಬಹುದು ಅಥವಾ ಅಭಿವೃದ್ಧಿಪಡಿಸಬಹುದು ಎಂಬ ಬಗ್ಗೆಯೂ ಅಧ್ಯಯನ ನಡೆಯಲಿದೆ. ಮುಖ್ಯವಾಗಿ ಕೂಳೂರಿನಿಂದ ನಂತೂರುವರೆಗೆ ಎಲಿವೇಟೆಡ್ ಹೈವೇ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಕುಳೈ ಮತ್ತು ಕುಂಟಿಕಾನ ಹೈವೇಯಲ್ಲಿ ಎಲಿವೇಟೆಡ್ ಹೈವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಜೆ ಆಸ್ಪತ್ರೆಯ ಬಳಿಕ ಕದ್ರಿ ಹಿಲ್ಸ್ ಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎನ್ನುತ್ತಾರೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು.
‘ಬಿ.ಸಿ.ರೋಡ್- ಸುರತ್ಕಲ್ ಹಾಗೂ ಕುಂದಾಪುರ-ತಲಪಾಡಿ ಹೆದ್ದಾರಿ ಭಾಗಗಳನ್ನು ಸುಧಾರಣೆಗೊಳಪಡಿಸುವುದಕ್ಕೆ ಕುರಿತು ಡಿಪಿಆರ್ ಮಾಡುವುದಕ್ಕೆ ಪ್ರಾಧಿಕಾರ ನಿರ್ಧರಿಸಿದೆ. ಸದ್ಯ ಟೆಂಡರ್ ಪಡೆಯುವ ಏಜೆನ್ಸಿ ಈ ಬಗ್ಗೆ ಸರ್ವೆ ನಡೆಸಿ ಡಿಪಿಆರ್ ಸಿದ್ಧಗೊಳಿಸಲು ಇನ್ನೂ 7-8 ತಿಂಗಳು ಬೇಕಾಗಬಹುದು. ಕೂಳೂರಿಂದ ನಂತೂರುವರೆಗೆ ಸುಗಮ ಸಂಚಾರಕ್ಕೆ ಸಂಬಂಧಿಸಿ ಸರ್ವಿಸ್ ರಸ್ತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಡಿಪಿಆರ್ ನಡೆಸಲಾಗುತ್ತಿದೆ.
ಅಬ್ದುಲ್ಲ ಜಾವೇದ್ ಅಜ್ಮಿ, ಯೋಜನಾ ನಿರ್ದೇಶಕರು, ಎನ್ಎಚ್ಎಐ, ಮಂಗಳೂರು







