ಬಿಸಿಸಿಐ ಯುವ ಘಟಕಕ್ಕೆ ಚಾಲನೆ| ಉದ್ಯಮಿಗಳು ವೃತ್ತಿಪರ ಚಿಂತಕರಾಗಬೇಕು: ಯಝ್ದಿನಿ ಫಿರೋಝ್

ಮಂಗಳೂರು: ಜಗತ್ತು ಕೇವಲ ಕಠಿಣ ಪರಿಶ್ರಮಕ್ಕೆ ಮಾತ್ರವಲ್ಲದೆ ವೃತ್ತಿಪರ ಚಿಂತಕರಿಗೆ ತಮ್ಮ ದುಡಿಮೆಗೆ ಪ್ರತಿಫಲ ನೀಡುತ್ತದೆ. ಉದ್ಯಮಿಗಳು ವೃತ್ತಿಪರ ಚಿಂತಕರಾಗಿರುವುದು ಅಗತ್ಯ ಎಂದು ಖ್ಯಾತ ಉದ್ಯಮಿ ಯಝ್ದಿನಿ ಫಿರೋಝ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಓಶಿಯನ್ ಪರ್ಲ್‌ನಲ್ಲಿ ಮಂಗಳವಾರ ನಡೆದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಯುವ ವಿಭಾಗ - ಬಿಸಿಸಿಐ ಯೂತ್ ವಿಂಗ್‌ನ ಚಾಲನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಬ್ಯಾರಿ ಸಮುದಾಯದ ಉದ್ಯಮಿಗಳಿಗೆ ಭಾರತದಲ್ಲಿ ಮುಸ್ಲಿಮರನ್ನು ವ್ಯಾಪಾರ ಮತ್ತು ಉದ್ಯಮದಲ್ಲಿ ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಅವರು ಹೇಳಿದರು.
ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಿಸಿಸಿಐ ಯುವ ವಿಭಾಗಕ್ಕೆ ಸಂಯೋಜಕರಾಗಿ ಝೀಶನ್ ರಮ್ಲಾನ್, ಅಸ್ಸರ್ ರಝಾಕ್, ಅಯಾನ್ ಹಾರಿಸ್ ಮತ್ತು ಮುಹಮ್ಮದ್ ಶಹಬಾಝ್ ಇದೇ ಸಂದರ್ಭದಲ್ಲಿ ನೇಮಕಗೊಂಡರು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ ಮತ್ತು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು.
ಬದ್ರುದ್ದೀನ್ ಪಣಂಬೂರು ಕಿರಾಅತ್ ಪಠಿಸಿದರು.
ಈ ಕಾರ್ಯಕ್ರಮದ ಮೂಲಕ ಬ್ಯಾರಿ ಸಮುದಾಯದ ಮುಖಂಡರು, ವೃತ್ತಿಪರರು ಮತ್ತು ಒಟ್ಟು ಸೇರಿ ಉದ್ಯಮಶೀಲತೆ, ಸಮುದಾಯದ ಬೆಳವಣಿಗೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವ್ಯಾಪಾರದ ಪಾತ್ರದ ಕುರಿತು ಚರ್ಚಿಸಿದರು.
ಬಿಸಿಸಿಐ ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋಶಾಧಿಕಾರಿ ಮನ್ಸೂರ್ ಅಹ್ಮದ್ ವಂದಿಸಿದರು.







