BIT: ಎನ್ಎಸ್ಎಸ್ ವತಿಯಿಂದ ಮಾದಕ ದ್ರವ್ಯ ವಿರೋಧಿ ಮತ್ತು ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ

ಮಂಗಳೂರು, ಆ. 13: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ ಎನ್ಎಸ್ಎಸ್ ಘಟಕವು “A Safe Mind. A Safe Campus. Say No to Ragging & Drugs.” ಎಂಬ ಘೋಷವಾಕ್ಯದಡಿಯಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಹಾಗೂ ರ‍್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಾಣದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಮಂಗಳವಾರ ಮಂಗಳೂರಿನ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ (ಬಿಕೆಸಿ) ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಡೆ, ಕಾನೂನು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿ ಮಾತನಾಡಿದ ಬಿಐಟಿಯ ಪ್ರಾಂಶುಪಾಲ ಡಾ. ಎಸ್.ಐ. ಮಂಜುರ್ ಬಾಷಾ, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ಮುಕ್ತ, ರ‍್ಯಾಗಿಂಗ್ ವಿರೋಧಿ ಪರಿಸರ ನಿರ್ಮಾಣದ ಮಹತ್ವವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಪರಸ್ಪರ ಗೌರವ ಮತ್ತು ಸಹಕಾರದ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಗಾಂವ್ಕರ್ ಅವರು ಮಾತನಾಡಿ, ಮಾದಕ ದ್ರವ್ಯ ಸೇವನೆಯ ಹಾನಿಕಾರಕ ಪರಿಣಾಮಗಳು ಮತ್ತು ರ‍್ಯಾಗಿಂಗ್ ಸಂಬಂಧಿತ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನೈಜ ಘಟನೆಗಳ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಮತ್ತೊಬ್ಬ ಪೊಲೀಸ್ ಅಧಿಕಾರಿ ರಮೇಶ್ ಅವರು ಮಾತನಾಡಿ ಶಿಸ್ತು, ಕಾನೂನು ಜ್ಞಾನದ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ, ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ಪ್ರಾಂಶುಪಾಲರರಾದ ಖಲೀಲ್ ರಝಾಕ್ ಶೇಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ. ಪೃಥ್ವಿರಾಜ್ ಎಂ, ರ‍್ಯಾಗಿಂಗ್ ಮತ್ತು ಡ್ರಗ್ಸ್ ವಿರೋಧಿ ಕಾರ್ಯಕ್ರಮದ ಸಂಯೋಜಕ ಮುಸ್ತಫಾ ಖಲೀಲ್, ಪೊಲೀಸ್ ಸಿಬ್ಬಂದಿ ಮುಹಮ್ಮದ್ ಗೌಸ್ ಅಸುಂಡಿ ಹಾಜರಿದ್ದರು.
ಬಿಐಟಿಯ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಮುಹಮ್ಮದ್ ಕಫೀಲ್ ಡೆಲ್ವಿ ಸ್ವಾಗತಿಸಿ, ವಂದಿಸಿದರು.







