ಬೆಳ್ತಂಗಡಿ | ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸ್ ದಾಳಿ : ಪ್ರಕರಣ ದಾಖಲು

ಬೆಳ್ತಂಗಡಿ : ಅಕ್ರಮವಾಗಿ ಸರಕಾರಕ್ಕೆ ರಾಜಧನ ಕಟ್ಟದೆ ನದಿಯ ಕಿನಾರೆಯಿಂದ ಹಿಟಾಚಿ ಬಳಸಿ ಮರಳು ತೆಗೆಯುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸರು ಜ.8 ರಂದು ಬೆಳಗ್ಗೆ ಖಚಿತ ಮಾಹಿತಿ ಮೇರೆಗೆ ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ದಾಳಿ ಮಾಡಿದಾಗ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಹಿಚಾಚಿ ಮೂಲಕ ಟಿಪ್ಪರ್ ಲಾರಿಗೆ ತುಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ದಾಳಿ ವೇಳೆ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಲಾರಿ ಬಿಟ್ಟು ಓಡಿ ಹೋಗಿದ್ದು, ಹಿಟಾಚಿ ಅಪರೇಟರ್ ನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಚಾರ್ಮಡಿಯ ಮಹಮ್ಮದ್ ಶಮೀರುದ್ದಿನ್ ಎಂಬುದಾಗಿ ಹಾಗೂ ಓಡಿ ಹೋದ ಟಿಪ್ಪರ್ ಚಾಲಕ ನ ಹೆಸರು ಚಾರ್ಮಾಡಿಯ ಹೆಚ್.ಹನೀಫ್ ಎಂಬುದಾಗಿ ತಿಳಿಸಿದ್ದಾನೆ. ಬೆಳ್ತಂಗಡಿ ಪೊಲೀಸರಿಗೆ ತಿಳಿಯದಂತೆ ಹಲವು ಸಮಯಗಳಿಂದ ಕದ್ದುಮುಚ್ಚಿ ಆರೋಪಿ ಇದೇ ಸ್ಥಳದಿಂದ ಸರಕಾರದ ಬೊಕ್ಕಸಕ್ಕೆ ವಂಚನೆ ಮಾಡಿ ಮರಳು ಕಳ್ಳತನ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಅಕ್ರಮವಾಗಿ ಮರಳು ತುಂಬಿದ್ದ 3,50,000 ಮೌಲ್ಯದ ಟಿಪ್ಪರ್ KA-41-C-0057 ಮತ್ತು 2,50,000 ಮೌಲ್ಯದ DOOSAN HITACHI- 150 ವಶಪಡಿಸಿಕೊಂಡಿದ್ದು, ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮೀರುದ್ದಿನ್ ಮತ್ತು ಹೆಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2023(u/s303(2),3,(5)) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





