ಬೆಳ್ತಂಗಡಿ| ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: 13 ಖಾತೆಗಳ ವಿರುದ್ಧ ಸೌಜನ್ಯ ತಾಯಿ ಕುಸುಮಾವತಿ ದೂರು; ಪ್ರಕರಣ ದಾಖಲು

ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯ ಪರ ಹೋರಟಗಾರರ ವಿರುದ್ಧ ಅಶ್ಲೀಲವಾದ ಬರಹ, ಮಾನಹಾನಿಕರ ವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ಧ ದೂರು ನೀಡಿದ್ದು, ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್ ಗಳ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ , ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜ್ಪೆ, ಅಮಿತ್ ಬಜ್ಪೆ, ಅನುಶೆಟ್ಟಿ, ನವೀನ್ ಗೌಡ, ಜೈ ಕುಂಜ್ಞಪ್ಪ, ವೈ. ಎಂ.ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್ಕ್, Instagram ಅಕೌಂಟ್ ಟ್ರೋಲ್ ತಿಮ್ಮರೌಡಿ, ಶೆಟ್ಟಿ ತನುಷ್ ಎಂಬ ಖಾತೆಗಳ ವಿರುದ್ಧ ದೂರು ನೀಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ.4 ರಂದು ಕುಸುಮಾವತಿ ನೀಡಿದ ದೂರಿನ ಮೇರೆಗೆ BNS-2023(u/s-79,296) ಅಡಿಯಲ್ಲಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಸರಾಂಶ:-
ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕುಸುಮಾವತಿ ಅವರು ಕಳೆದ 13 ವರ್ಷಗಳಿಂದ ತನ್ನ ಮಗಳಾದ ಸೌಜನ್ಯ ಸಾವಿನ ಬಗ್ಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಕುಸುಮಾವತಿ ಹಾಗೂ ಇವರ ಜೊತೆ ನ್ಯಾಯಪರ ಹೋರಾಟದಲ್ಲಿ ತೊಡಗಿ ಕೊಂಡಿದ್ದ ಸೌಜನ್ಯ ಪರ ಹೋರಾಟಗಾರರ ಪೊಟೋಗಳನ್ನು ಮಾರ್ಪ್ ಮಾಡಿ ಆಶ್ಲೀಲವಾಗಿ ಬರೆದು ಸಾರ್ವಜನಿಕ ವಾಗಿ ಹರಿಯಬಿಟ್ಟು ಕುಸುಮಾವತಿ ಹಾಗೂ ಇವರ ಜೊತೆ ಇರುವ ಸೌಜನ್ಯ ನ್ಯಾಯ ಪರ ಹೋರಾಟಗಾರರಿಗೆ ಸಾರ್ವಜನಿಕವಾಗಿ ಮಾನಕ್ಕೆ ಹಾನಿಯಾಗುವ ರೀತಿಯಲಿ ವಿದ್ಯುನ್ಮಾನ ಸಾಧನದ ಮೂಲಕ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಹಾಗೂ Instagram ನಲ್ಲಿ 1.8.2024 ರಿಂದ 3.9.2025 ರ ಮಧ್ಯದ ಅವಧಿಯಲ್ಲಿ ನಿರಂತರವಾಗಿ ಹರಿಯಟ್ಟಿರುವುದನ್ನು ಕುಸುಮಾವತಿ ಅವರು ತನ್ನ ತಮ್ಮ ಪುರಂದರ ಗೌಡ ಅವರ ಮೊಬೈಲ್ ನಲ್ಲಿ ನೋಡಿರುವುದಾಗಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.







