ಬೆಳ್ತಂಗಡಿ | ಶಾಲಾ ವಾರ್ಷಿಕೋತ್ಸವದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

ಬೆಳ್ತಂಗಡಿ, ಡಿ.12: ಅಳದಂಗಡಿಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ದಕ್ಕೆಯುಂಟು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲಾಡಳಿತ ಮಂಡಳಿ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರು ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿದ್ದಾರೆ.
ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಂದರ್ಭ ನಡೆಸಿದ ಪಹಲ್ಗಾಮ್ ದಾಳಿಯ ಬಗ್ಗೆ ಪ್ರಸ್ತುತಪಡಿಸಿದ ನೃತ್ಯ ರೂಪಕದಲ್ಲಿ ಮುಸ್ಲಿಮರ ಟೋಪಿ ಶಾಲು ಧರಿಸಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದೆ. ಮುಸ್ಲಿಮ್ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಮೂಡಲು ಕಾರಣವಾಗಿದೆ ಎಂಬ ಆರೋಪ ಸಮುದಾಯದ ಜನರಿಂದ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಶಾಲೆಯ ಸಂಚಾಲಕ ಫಾ.ಎಲ್ಯಾಸ್ ಡಿಸೋಜ ಮುಸ್ಲಿಮ್ ಸಮುದಾಯದ ಮುಖಂಡರು, ಧರ್ಮಗುರುಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರ ಸಭೆ ನಡೆಸಿ ಕಾರ್ಯಕ್ರಮದಲ್ಲಿ ಆಗಿರುವ ಗೊಂದಲದ ಬಗ್ಗೆ ಚರ್ಚೆ ನಡೆಸಿ ಇದರ ಬಗ್ಗೆ ಶಾಲಾಡಳಿತ ಮಂಡಳಿ ವಿಷಾದ ವ್ಯಕ್ತಪಡಿತು. ಅಲ್ಲದೇ ಮುಸ್ಲಿಮ್ ಸಮುದಾಯದ ಮುಖಂಡರುಗಳು ಮುಂದಿಟ್ಟ ಬೇಡಿಕೆಗಳನ್ನು ನೆರವೇರಿಸುವ ಒಪ್ಪಿಗೆ ನೀಡಿದರು. ಅಲ್ಲದೇ ಇಂತಹ ಘಟನೆಗಳು ಪುನರಾವರ್ತಿಸದಂತೆ ಕ್ರಮ ಕೈಗೊಳ್ಳುವುದಾಗಿ ಶಾಲಾಡಳಿತ ಮಂಡಳಿ ಭರವಸೆ ನೀಡಿದೆ. ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದ್ದು ಸಮುದಾಯಗಳ ನಡುವೆ ಯಾವುದೇ ಗೊಂದಲವಿಲ್ಲದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಶಾಲಾಡಳಿತ ಮಂಡಳಿ ಪತ್ರಿಕಾ ಪ್ರಕಟನೆ ತಿಳಿಸಿದೆ.







