ಬೆಳ್ತಂಗಡಿ | ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ

ಬೆಳ್ತಂಗಡಿ: ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಹಾಗೂ ಹಿರಿಯ ಭಾಗವತ, ರಸರಾಗ ಚಕ್ರವರ್ತಿ ಬಿರುದಾಂಕಿತ ದಿನೇಶ್ ಅಮ್ಮಣ್ಣಾಯ( 65) ಗುರುವಾರ ನಿಧನರಾಗಿದ್ದಾರೆ.
ಮೃತರು ಪತ್ನಿ ಇಬ್ಬರು ಪುತ್ರಿಯರ ಸಹಿತ ಅಪಾರ ಅಭಿಮಾನಿ, ಬಂಧುಗಳನ್ನು ಅಗಲಿದ್ದಾರೆ.
ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದ ಅಮ್ಮಣ್ಣಾಯ, ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ಆ ಕಾಲದ ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಎಡನೀರು ಮೇಳದಲ್ಲೂ ತಿರುಗಾಟ ನಡೆಸಿದ್ದರು. ವಿಶ್ರಾಂತ ಜೀವನವನ್ನು ನಡೆಸುತ್ತಿದ್ದ ಅಮ್ಮಣ್ಣಾಯರು ಭಾಗವತರಾಗಿ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
Next Story





