ಬೆಳ್ತಂಗಡಿ: ಸುಜಾತಾ ಭಟ್ರನ್ನು ವಿಚಾರಣೆ ನಡೆಸಿದ ಎಸ್ಐಟಿ

(ಸುಜಾತಾ ಭಟ್)
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಮುಂದುವರಿದಿದ್ದು ಸುಜಾತಾ ಭಟ್ ಅವರು ಬುಧವಾರ ಇಡೀ ದಿನ ಎಸ್.ಐ.ಟಿ ಮುಂದೆ ವಿಚಾರಣೆ ಎದುರಿಸಿದರು.
ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳಕ್ಕೆ ಬಂದವಳು 2003 ರಲ್ಲಿ ನಾಪತ್ತೆಯಾಗಿದ್ದಾಳೆ. ಅವಳ ಅಸ್ತಿಯನ್ನಾದರೂ ಹುಡುಕಿ ಕೊಡಿ ಎಂದು ಧರ್ಮಸ್ಥಳ ಪೊಲೀಸರಿಗೆ ಸುಜಾತಾ ಭಟ್ ದೂರು ನೀಡಿದ್ದರು. ಧರ್ಮಸ್ಥಳ ಪ್ರಕರಣಗಳ ಬಗ್ಗೆ ತನಿಖೆಗಾಗಿ ಎಸ್.ಐ.ಟಿ ರಚನೆಯಾದ ನಂತರ ಧರ್ಮಸ್ಥಳ ಪೊಲೀಸರು ಈ ದೂರನ್ನು ಎಸ್.ಐ.ಟಿ ಗೆ ಹಸ್ತಾಂತರಿಸಿದ್ದರು.
ಎಸ್.ಐ.ಟಿ ತನಿಖೆ ಮುಂದುವರಿಯುತ್ತಿರುವಾಗಲೇ ಸುಜಾತಾ ಭಟ್ ಅವರು ಹಲವು ಗೊಂದಲ ಹೇಳಿಕೆಗಳನ್ನು ನೀಡಿದ್ದು, ಅವರು ತನ್ನ ಮಗಳೆಂದು ಯುವತಿಯೊಬ್ಬಳ ಫೋಟೊವನ್ನು ಪ್ರದರ್ಶಿಸಿದ್ದರು ಎನ್ನಲಾಗಿದೆ. ಆದರೆ ಇದು ಆಕೆಯ ಮಗಳ ಫೋಟೊವಲ್ಲ ಎಂಬ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿದ್ದಂತೆಯೇ ಸುಜಾತಾ ಭಟ್ ಯೂಟ್ಯೂಬರ್ ಒಬ್ಬರೊಂದಿಗೆ ಮಾತನಾಡುತ್ತಾ ಅನನ್ಯಾ ಭಟ್ ಎಂಬ ಮಗಳೆ ನನಗೆ ಇರಲಿಲ್ಲ ನಾನು ಸುಳ್ಳು ಹೇಳಿರುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಆಕೆ ತನ್ನನ್ನು ಬೆದರಿಸಿ ಹೇಳಿಕೆ ಪಡೆದಿದ್ದಾರೆ, ತಾನು ಎಸ್.ಐ.ಟಿ ಮುದೆ ಹೇಳಿಕೆ ನೀಡುತ್ತೇನೆ ಎಂದಿದ್ದರು.
ಆ. 26ರಂದು ಸುಜಾತಾ ಭಟ್ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಎಸ್.ಐ.ಟಿ ಕಚೇರಿಗೆ ಬಂದಿದ್ದರು ಎನ್ನಲಾಗಿದ್ದು, ದಿನವಿಡೀ ಎಸ್.ಐ.ಟಿ ಕಚೇರಿಯಲ್ಲಿದ್ದ ಸುಜಾತಾ ಭಟ್ ಅವರಿಂದ ಹಲವು ಮಾಹಿತಿಗಳನ್ನು ಎಸ್.ಐ.ಟಿ ಅಧಿಕಾರಿಗಳು ಪಡೆದುಕೊಂಡಿದ್ದರು. ರಾತ್ರಿಯ ವೇಳೆಗೆ ಅವರು ಎಸ್.ಐ.ಟಿ ಕಚೇರಿಯಿಂದ ಹಿಂತಿರುಗಿದ್ದರು.
ಬುಧವಾರವೂ ಸುಜಾತಾ ಭಟ್ ಎಸ್.ಐ.ಟಿ ಕಚೇರಿಗೆ ಬಂದಿದ್ದು ದಿನವಿಡೀ ವಿಚಾರಣೆ ಎದುರಿಸಿದ್ದಾರೆ. ಜಾಗದ ವಿಚಾರವಾಗಿ ತನಗೆ ಅನ್ಯಾಯವಾಗಿದೆ ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.
ಎರಡು ವರ್ಷಗಳ ಹಿಂದೆ ಯೂಟ್ಯೂಬ್ ಒಂದರಲ್ಲಿ ಸುಜಾತಾ ಭಟ್ ಅವರ ಹೇಳಿಕೆ ಮೊದಲ ಬಾರಿಗೆ ಬಂದಿತ್ತು. ಇದಾದ ಬಳಿಕ ಅವರ ಹೇಳಿಕೆಗಳು ಅಲ್ಲಲ್ಲಿ ಕಾಣಿಸಿತ್ತು. ಯೂಟ್ಯೂಬ್ ನಲ್ಲಿ ನೀಡಿದ ಹೇಳಿಕೆಯನ್ನು ನೋಡಿ ಸುಜಾತಾ ಭಟ್ ಅವರನ್ನು ಸಂಪರ್ಕಿಸಲಾಗಿರುವುದಾಗಿ ನೀತಿ ತಂಡದ ಜಯಂತ್ ಅವರು ತಿಳಿಸಿದ್ದರು. ಸುಜಾತಾ ಭಟ್ ಸೌಜನ್ಯ ಪರ ಹೋರಾಟಗಾರರಲ್ಲಿಯೂ ಇದೇ ಹೇಳಿಕೆಯನ್ನು ನೀಡಿದ್ದರು.
ತನಗೆ ಅನನ್ಯ ಭಟ್ ಎಂಬ ಮಗಳೇ ಇಲ್ಲ ಎಂದು ಹೇಳಿಕೆ ನೀಡುವ ಸಂದರ್ಶನದಲ್ಲಿ ಸುಜಾತಾ ಭಟ್ ಅವರು ತನ್ನಲ್ಲಿ ಹೀಗೆ ಹೇಳುವಂತೆ ಸೌಜನ್ಯ ಪರ ಹೋರಾಗಾರರು ಹೇಳಿದ್ದರು ಎಂದು ಜಯಂತ್ ಹಾಗೂ ಮಟ್ಟಣ್ಣನವರ್ ಅವರ ಹೆಸರುಗಳನ್ನು ಹೇಳಿದ್ದರು. ಸುಜಾತಾ ಭಟ್ ಹೇಳುತ್ತಿರುವ ಅನನ್ಯಾ ಭಟ್ ಎಂಬ ಮಗಳ ಕತೆ ಆಕೆಯಾಗಿಯೇ ಸೃಷ್ಟಿಸಿರುವುದಾ ಅಥವಾ ಅದರ ಹಿಂದೆ ಬೇರೆ ಯಾವುದಾದರೂ ಸಂಚಿದೆಯಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.







