ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕುವಂತೆ ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ

ಮಂಗಳೂರು: ಯಕ್ಷಗಾನಕ್ಕೆ ಸಂಬಂಧಪಡದ ಕಾರ್ಯಕ್ರಮವೊಂದರಲ್ಲಿ ಕಲಾವಿದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕು ಮತ್ತು ಅವರ ಮೇಲೆ ಕೇಸ್ ದಾಖಲಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಳಿಮಲೆ ಅವರು ಆಡಿರುವ ಮಾತಿನಿಂದಾಗಿ ಯಕ್ಷಗಾನ ಕಲಾವಿದರಿಗೆ, ಯಕ್ಷಗಾನ ಮೇಳವವರಿಗೆ, ಯಕ್ಷಗಾನ ಅಭಿಮಾನಿಗಳಿಗೆ ಸೇರಿದಂತೆ ಎಲ್ಲರಿಗೂ ನೋವಾಗಿದೆ" ಎಂದರು.
ಬಿಳಿಮಲೆ ಅವರು ತಮಗೆ ಸರಕಾರ ಕೊಟ್ಟಿರುವ ಗೌರವಯುತ ಅಧಿಕಾರವನ್ನು ದುರುಪಯೋಗ ಮಾಡಿ, ಜನರ ಮನಸ್ಸನ್ನು ನೋಯಿಸುವ ಕೆಲಸ ಮಾಡಿದ್ದಾರೆ. ಅವರ ಮೇಲೆ ಸುಮೋಟೊ ಕೇಸ್ ದಾಖಲಿಸಬೇಕು ಎಂದರು.
ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ತರುವ ಕೆಲಸ ಆಗಿದೆ. ಹಲವಾರು ದೇವಸ್ಥಾನಗಳು ಯಕ್ಷಗಾನ ಮೇಳಗಳನ್ನು ನಡೆಸಿಕೊಂಡು ಬರುತ್ತಿದೆ. ಕಲಾವಿದರು ವ್ರತ ಹಿಡಿದು, ದೇವರ ಪೂಜೆ ಮಾಡಿ ರಂಗಸ್ಥಳಕ್ಕೆ ಇಳಿಯುತ್ತಾರೆ. ದೇವಸ್ಥಾನ ಮತ್ತು ಯಕ್ಷಗಾನದ ನಡುವೆ ಧಕ್ಕೆ ತರುವ ಕೆಲಸ ಇದೀಗ ಮಿತಿ ಮೀರಿದೆ. ಇದೀಗ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಲಾವಿದರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಒಬ್ಬನೇ ಕಾಂಗ್ರೆಸ್ ನಾಯಕ ಪ್ರತಿಕ್ರಿಯೆ ನೀಡಿಲ್ಲ ಎಂದ ಮೇಲೆ ಇದು ಸರಕಾರಿ ಪ್ರಾಯೋಜಿತ ಎಂದು ಭಾವಿಸಬೇಕಾಗುತ್ತದೆ. ಸರಕಾರ ಬಿಳಿಮಲೆ ಹೇಳಿಕೆಯ ಪ್ರತಿಕ್ರಿಯೆ ನೀಡಲಿ ಎಂದು ನುಡಿದರು.
ಬೇಷರತ್ ಕ್ಷಮೆ ಯಾಚಿಸಲಿ: ಸರಪಾಡಿ ಅಶೋಕ್ ಶೆಟ್ಟಿ
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, "ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನ ನೀಡಿರುವ ಕೊಡುಗೆ ಅನನ್ಯ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರಾಧಿಕಾರದ ಅಧ್ಯಕ್ಷ ರಾಗಿರುವ ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಬಗ್ಗೆ ಆ ರೀತಿ ಕೆಟ್ಟ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು. ಅವರು ಬೇಷರತ್ ಕ್ಷಮೆ ಯಾಚಿಸಲಿ" ಎಂದು ಆಗ್ರಹಿಸಿದರು.
ಡಾ.ಪುರುಷೋತ್ತಮ ಬಿಳಿಮಲೆ ಅವರು ಖ್ಯಾತ ಸಾಹಿತಿ, ಕಲಾವಿದರು, ಕಲಾಪೋಷಕರು,ಕಲಾ ಆರಾಧಕರು. ಯಕ್ಷಗಾನವನ್ನು ನೋಡುತ್ತಾ , ಕೇಳುತ್ತಾ ಬೆಳೆದ ಅವರು ಯಾವ ಕಾರಣಕ್ಕಾಗಿ ಈ ರೀತಿಯ ಹೇಳಿಕೆ ಕೊಟ್ಟರು ಎನ್ನುವುದು ಗೊತ್ತಿಲ್ಲ. ನಾನು ಯಕ್ಷಗಾನ ಕಲಾವಿದನಾಗಿ, ಸಂಘಟಕನಾಗಿ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಅನುಭವದಲ್ಲಿ ಅಂತಹ ಘಟನೆಯನ್ನು ನೋಡಿಲ್ಲ. ಬಿಳಿಮಲೆಯವರು ಕಲಾವಿದರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇದು ಖಂಡನಾರ್ಹ ಎಂದರು.
ಕನ್ನಡ ಪ್ರಾಧಿಕಾರಕ್ಕೆ ಕಳಂಕ ತಂದಿರುವ ಬಿಳಿಮಲೆ ಅವರನ್ನು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡದೆ, ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಶೇಟ್, ಕಲಾವಿದರಾದ ಸತೀಶ್ ಶೆಟ್ಟಿ , ರವಿ ಅಲೆವೂರಾಯ ಉಪಸ್ಥಿತರಿದ್ದರು.







