ಮುನ್ನೂರು ಗ್ರಾ.ಪಂ ಸದಸ್ಯ ಭುಜಂಗ ರೈ ನಿಧನ

ಉಳ್ಳಾಲ: ಸಿಪಿಎಂ ನೇತಾರ ಮುನ್ನೂರು ಗ್ರಾ.ಪಂ ಸದಸ್ಯ ಕುತ್ತಾರು ಮದಕ ನಿವಾಸಿ ಭುಜಂಗ ರೈ (74) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.
ಮೂಲತ: ಕಾಸರಗೋಡು ನಿವಾಸಿಯಾಗಿರುವ ಇವರು ಕುತ್ತಾರು ಮದಕಕ್ಕೆ 30 ವರ್ಷಗಳ ಹಿಂದೆ ಬಂದಿದ್ದರು. ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದವರು. ಸಿಪಿಎಂ ಪಕ್ಷದ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ಇವರು ಆಂಗ್ಲ ಭಾಷೆಯಲ್ಲಿ ಪರಿಣತರಾಗಿದ್ದರು.
1999 ರಲ್ಲಿ ಮುನ್ನೂರು ಗ್ರಾಮ ಪಂಚಾಯಿತಿನ ಸಂತೋಷನಗರ ವಾರ್ಡಿನಿಂದ ಸ್ಪರ್ಧಿಸಿ ಸದಸ್ಯರಾಗಿದ್ದರು. ನಂತರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ 4 ನೇ ವಾರ್ಡಿನಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳೇ ತಾಲೂಕು ಪಂಚಾಯಿತಿ ಸದಸ್ಯರಾಗುತ್ತಿದ್ದ ಸಂದರ್ಭ ಅಂಬ್ಲಮೊಗರು-ಮುನ್ನೂರು ಗ್ರಾಮದಿಂದ 1995ರ ಅವಧಿಯಲ್ಲಿ ಪ್ರಥಮವಾಗಿ ಸ್ಪರ್ಧಿಸಿ ಎದುರಾಳಿ ಅಭ್ಯರ್ಥಿಯಿಂದ ಕೇವಲ 7 ಮತಗಳ ಅಂತರದಲ್ಲಿ ಪರಾಜಿತರಾಗಿದ್ದರು. ಐದು ತಿಂಗಳಿನಿಂದ ಅನಾರೋಗ್ಯದಿಂದ ಇದ್ದ ಭುಜಂಗ ರೈ ಜ್ಯೋತಿಷ್ಯ ಶಾಸ್ತ್ರವನ್ನು ಮನೆಯಲ್ಲಿ ನಡೆಸುತ್ತಿದ್ದರು.
ಇವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಸಭೆ ರದ್ದು
ಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ಮಾಸಿಕ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸದಸ್ಯರ ನಿಧನದ ಸುದ್ಧಿ ತಿಳಿಯುತ್ತಿದ್ದಂತೆಯೇ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಇವರು ಸಭೆಯನ್ನು ರದ್ದುಗೊಳಿಸುವಂತೆ ನಿರ್ದೇಶಿಸಿದ್ದರು. ಅದರಂತೆ ಮೃತರಿಗೆ ಸಂತಾಪ ವ್ಯಕ್ತಪಡಿಸಿ ಸಾಮಾನ್ಯ ಸಭೆಯನ್ನು ರದ್ದುಗೊಳಿಸಲಾಗಿದೆ.





