ಬಿಕರ್ನಕಟ್ಟೆ: ಸರಣಿ ಅಪಘಾತ; ಐವರಿಗೆ ಗಾಯ

ಮಂಗಳೂರು, ಸೆ.25: ನಗರದ ಬಿಕರ್ನಕಟ್ಟೆ ಬಳಿ ಸೋಮವಾರ ಸರಣಿ ಅಪಘಾತ ಸಂಭವಿಸಿ 10 ವಾಹನಗಳು ಜಖಂಗೊಂಡ ಮತ್ತು 5 ಮಂದಿ ದ್ವಿಚಕ್ರ ವಾಹನ ಸವಾರರು ಗಾಯಗೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಬಿಕರ್ನಕಟ್ಟೆ ಶಾಲೆಯ ಮುಂದೆ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ವಾಹನಗಳು ನಿಂತಿದ್ದವು. ಈ ವೇಳೆ ಹಿಂದಿನಿಂದ ಅಪಾಯಕಾರಿಯಾಗಿ ಬಂದ ಲಾರಿಯೊಂದು ಮೊದಲು ಎರಡು ಕಾರುಗಳಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ಪೈಕಿ ಒಂದು ಕಾರು ಮುಂದಕ್ಕೆ ನುಗ್ಗಿ ಎದುರಿನಲ್ಲಿ ನಿಂತಿದ್ದ ಒಂದು ಬೈಕ್ ಮತ್ತು ಎರಡು ಸ್ಕೂಟರ್‌ಗಳಿಗೆ ಢಿಕ್ಕಿಯಾಯಿತು. ಢಿಕ್ಕಿಯ ರಭಸಕ್ಕೆ ಒಂದು ಬೈಕ್ ಕಾರಿನ ಅಡಿಗೆ ಸಿಲುಕಿತು. ಸ್ಕೂಟರ್‌ಗಳು ಮುಂದಕ್ಕೆ ನುಗ್ಗಿ ಮುಂಭಾಂಗದಲ್ಲಿ ನಿಲ್ಲಿಸಿದ್ದ ಟಿಟಿ ವಾಹನಕ್ಕೆ ಢಿಕ್ಕಿಯಾದವು. ಟಿಟಿ ವಾಹನ ಅದರ ಮುಂದಿದ್ದ ಎರಡು ಕಾರುಗಳಿಗೆ ಢಿಕ್ಕಿ ಹೊಡೆಯಿತು.
ಅಪಘಾತದಲ್ಲಿ ಒಟ್ಟು 10 ವಾಹನಗಳು ಜಖಂಗೊಂಡಿವೆ. ದೀಕ್ಷಿತ್ ಹಾಗೂ ಇತರ ಮೂವರು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಘಟನೆ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.





