ಅಪಘಾತದಲ್ಲಿ ಬೈಕ್ ಸವಾರ ಮೃತ್ಯು: ಕಾರು ಚಾಲಕನಿಗೆ ಶಿಕ್ಷೆ

ಮಂಗಳೂರು, ಜ.8: ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಆರೋಪಿ ಕಾರು ಚಾಲಕ ವಿನೋದ್ ಕುಮಾರ್ ಎಂಬಾತನಿಗೆ ನ್ಯಾಯಾಲಯವು 15 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 16,500 ರೂ. ದಂಡ ವಿಧಿಸಿದೆ.
2023ರ ಜೂ.11ರಂದು ವಾಮಂಜೂರಿನ ವಿನೋದ್ ಕುಮಾರ್ ಎಂಬಾತ ಮೇರಿಹಿಲ್ ಕಡೆಯಿಂದ ಕೆಪಿಟಿ ಕಡೆಗೆ ಸಾಗುವ ರಸ್ತೆಯಲ್ಲಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಯೆಯ್ಯಾಡಿ ಜಂಕ್ಷನ್‌ನ ತೆರೆದ ಡಿವೈಡರ್ ಬಳಿ ಬೈಕ್‌ಗೆ ಢಿಕ್ಕಿ ಹೊಡೆದಿದ್ದ. ಇದರಿಂದ ಶಕ್ತಿನಗರಕ್ಕೆ ಹೋಗುತ್ತಿದ್ದ ಬೈಕ್ ಸವಾರ ವೀರಪ್ಪ ವೀರಭದ್ರಪ್ಪ ಹಾಲಿಗೇರಿ ಹಾಗೂ ಸಹ ಸವಾರನಾಗಿದ್ದ ಅವರ ಪುತ್ರ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗೆ ಫಲಕಾರಿಯಾಗದೆ ವೀರಪ್ಪ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ ಅಪಘಾತ ಕ್ಕೆ ಕಾರಣವಾದ ಕಾರಿನ ವಿಮಾ ಪತ್ರ ಮತ್ತು ವಾಯು ಮಾಲಿನ್ಯ ತಪಾಸಣಾ ಪ್ರಮಾಣ ಪತ್ರ ಊರ್ಜಿತದಲ್ಲಿ ಇಲ್ಲದಿರುವುದು ಕಂಡು ಬಂದಿತ್ತು. ಈ ಬಗ್ಗೆ ಸಂಚಾರ ಪೂರ್ವ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾರು ಚಾಲಕನಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ ಮತ್ತು ಅರೋನ್ ಡಿಸೋಜ ವಿಟ್ಲ ವಾದ ಮಂಡಿಸಿದ್ದರು.







