‘ಡ್ರಗ್ಸ್ ವಿರೋಧ ಜಾಗೃತಿ ಮಾಸ’ ಅಭಿಯಾನಕ್ಕೆ ಮಂಗಳೂರು ಬಿಷಪ್ ಚಾಲನೆ
ಮಂಗಳೂರು: ‘ಡ್ರಗ್ಸ್ ಮುಕ್ತ ಧರ್ಮಪ್ರಾಂತ’ವನ್ನಾಗಿಸುವ ಗುರಿಯೊಂದಿಗೆ ಧರ್ಮಪ್ರಾಂತದ ಪಾಲನಾ ಪರಿಷತ್ ನೇತೃತ ದಲ್ಲಿ ಕುಟುಂಬ, ಯುವ, ಶಿಕ್ಷಣ, ಆರೋಗ್ಯ ಹಾಗೂ ಸಂಪರ್ಕ ಮಾಧ್ಯಮ ಆಯೋಗಗಳ ಸಹಯೋಗದಲ್ಲಿ ಧರ್ಮಪ್ರಾಂತ ವ್ಯಾಪ್ತಿಯಲ್ಲಿ ನಡೆಸಲಾಗುವ ‘ಡ್ರಗ್ಸ್ ವಿರೊಧ ಜಾಗೃತಿ ಮಾಸ’ ಅಭಿಯಾನಕ್ಕೆ ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಶುಕ್ರವಾರ ಚಾಲನೆ ನೀಡಿದರು.
ಡ್ರಗ್ಸ್ ಸಂಗ್ರಹದಿಂದ ತುಂಬಿದ ಗಾಜಿನ ಭರಣಿಯನ್ನು ಇನ್ಸಿನರೇಟರ್ ಫೈರ್ ಬಿನ್‌ಗೆ ಖಾಲಿ ಮಾಡಿ ಭರಣಿಯೊಳಗೆ ಮುಳುಗಿರುವ ಮಗುವಿನ ಗೊಂಬೆಯನ್ನು ಮುಕ್ತಗೊಳಿಸುವುದರ ಮೂಲಕ ಸಾಂಕೇತಿಕವಾಗಿ ಅಭಿಯಾನವನ್ನು ಬಿಷಪ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನಗರದ ಮಾದಕದ್ರವ್ಯ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕಿದೆ. ಈ ಬಗ್ಗೆ ಸಮಾಜ, ಸಮುದಾಯ ನಿರ್ಲಕ್ಷ್ಯ ತಾಳಿದರೆ ಅಪರಾಧಗಳು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಸರಕಾರ, ಪೊಲೀಸ್ ಇಲಾಖೆ ಯೊಂದಿಗೆ ಕೈ ಜೋಡಿಸಬೇಕಿದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಎಲ್ಲರೂ ಜೊತೆ ಕೂಡಿ ಕೆಲಸ ಮಾಡಬೇಕು. ಆವಾಗಲೇ ಅದರ ಪರಿಣಾಮ ಫಲಪ್ರದವಾಗುತ್ತದೆ ಎಂದರು.
ಮಾದಕ ವ್ಯಸನಗಳಿಂದ ಕುಟುಂಬಗಳು, ಯುವಕರು ಮತ್ತು ಮಕ್ಕಳು ಬಳಲುತ್ತಿದ್ದಾರೆ. ಈ ಸಾಮಾಜಿಕ ಸಮಸ್ಸೆಗೆ ಒಮ್ಮಸ್ಸಿನಿಂದ ಸ್ಪಂದಿಸಬೇಕಿದೆ. ಜಾತಿ, ಧರ್ಮ, ಭಾಷೆಯ ಗಡಿಗಳನ್ನು ಮೀರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ ಎಂದು ಬಿಷಪ್ ಕರೆ ನೀಡಿದರು.
‘ಡ್ರಗ್ಸ್ ತ್ಯಜಿಸಿ, ಜೀವನ ಆಲಿಂಗಿಸಿ’ ಎಂಬ ಘೋಷ ವಾಕ್ಯವನ್ನು ಹೊಂದಿರುವ ಅಭಿಯಾನವು ಧರ್ಮಪ್ರಾಂತದ ಚರ್ಚು ಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೆ.೩೦ರವರೆಗೆ ನಡೆಯುಲಿದೆ ಎಂದು ಅಭಿಯಾನದ ಸಂಚಾಲಕ ಲುವಿ ಜೆ. ಪಿಂಟೋ ಹೇಳಿದರು.
ಈ ಸಂದರ್ಭ ಅತಿ ವಂ. ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ, ಪಾಲನಾ ಪರಿಷತ್ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟೆಲಿನೊ, ತೆಲೊಕಾ ಅಡಿಕ್ಷನ್ ರಿಕವರಿ ಸೆಂಟರ್ ಮಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿ ಕ್ಲಾರಾ ಡಿಕುನ್ಹಾ, ಕುಟುಂಬ ಆಯೋಗದ ಕಾರ್ಯದರ್ಶಿ ವಂ. ಅನಿಲ್ ಆಲ್ಫ್ರೆಡ್ ಡಿಸೊಜ, ಶಿಕ್ಷಣ ಆಯೋಗದ ಕಾರ್ಯದರ್ಶಿ ವಂ. ಆಂಟೋನಿ ಶೇರಾ, ಆರೋಗ್ಯ ಆಯೋಗದ ಕಾರ್ಯದರ್ಶಿ ವಂ. ಅಜಿತ್ ಮಿನೇಜಸ್, ಯುವ ಆಯೋಗದ ಕಾರ್ಯದರ್ಶಿ ವಂ. ಅಶ್ವಿನ್ ಕಾರ್ಡೋಜ,ಮಾಧ್ಯಮ ಮತ್ತು ಸಂಪರ್ಕ ಆಯೋಗದ ಕಾರ್ಯದರ್ಶಿ ವಂ. ಅನಿಲ್ ಐವನ್ ಫೆನಾರ್ಂಡಿಸ್ ಉಪಸ್ಥಿತರಿದ್ದರು.