BIT | ವೃತ್ತಿ ಮಾರ್ಗದರ್ಶನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಅನೀಸ್ ಕುಟ್ಟಿ

ಮಂಜೇರಿ: ವೃತ್ತಿ ಮಾರ್ಗದರ್ಶನದಲ್ಲಿ ಶಿಕ್ಷಕರ ಪಾತ್ರ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಅವರು ಕೇವಲ ಪಾಠ ಬೋಧಕರಲ್ಲದೆ ವಿದ್ಯಾರ್ಥಿಗಳ ಮಾರ್ಗದರ್ಶಕರು ಹಾಗೂ ವೃತ್ತಿ ರೂಪಿಸುವ ಶಿಲ್ಪಿಗಳಾಗಬೇಕಾಗಿದೆ ಎಂದು ಶಿಕ್ಷಣ ತಜ್ಞ ಅನೀಸ್ ಕುಟ್ಟಿ ಅಭಿಪ್ರಾಯಪಟ್ಟರು.
ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧ್ಯಾಪಕರ ಉತ್ಕೃಷ್ಟ(faculty enrichment) ಕಾರ್ಯಕ್ರಮದ ಅಂಗವಾಗಿ ನಡೆದ ಕಮ್ಮಟದಲ್ಲಿ ಅವರು ಮಾತನಾಡಿದರು. ಅಂತರರಾಷ್ಟ್ರೀಯ ಸೆಮಿನಾರ್ ಹಾಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರ ವೃತ್ತಿಪರ ಅಭಿವೃದ್ಧಿ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳ ಕುರಿತು ಚರ್ಚೆ ನಡೆಯಿತು.
ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಅನೀಸ್ ಕುಟ್ಟಿ, ಫಲಿತಾಂಶ ಆಧಾರಿತ ಶಿಕ್ಷಣದ ಅಗತ್ಯತೆ, ಕಲಿಯುವವರಲ್ಲಿ ಕುತೂಹಲ, ಸ್ಥಿತಿಸ್ಥಾಪಕತೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಜವಾಬ್ದಾರಿಯ ಬಗ್ಗೆ ವಿವರಿಸಿದರು. ಕಮ್ಮಟವು ಸಂವಾದಾತ್ಮಕ ಸ್ವರೂಪ ಹೊಂದಿದ್ದು, ಅಧ್ಯಾಪಕರು ತಮ್ಮ ತರಗತಿ ಅನುಭವ ಗಳನ್ನು ಹಂಚಿಕೊಂಡು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಭಾರತ ಮತ್ತು ವಿದೇಶಗಳಲ್ಲಿ ಮಾರ್ಗದರ್ಶನ, ರಕ್ಷಣಾ ತರಬೇತಿ, ವೃತ್ತಿ ಸಮಾಲೋಚನೆ ಹಾಗೂ ಶಿಕ್ಷಕರ ತರಬೇತಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅನೀಸ್ ಕುಟ್ಟಿ, ಶೈಕ್ಷಣಿಕ ಪರಿಸರ ವ್ಯವಸ್ಥೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದನ್ನೂ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಕಾರ್ಯಕ್ರಮವನ್ನು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಂಬಿಯಾರ್ ಆಯೋಜಿಸಿದ್ದರು. ಕಮ್ಮಟದಲ್ಲಿನ ವಿಷಯಗಳ ಪ್ರಸ್ತುತತೆ, ಆಳ ಮತ್ತು ಪ್ರಾಯೋಗಿಕ ಮಾಹಿತಿಗೆ ಅಧ್ಯಾಪಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿತು.







