ನಮ್ದೇನೂ ತಪ್ಪಿಲ್ಲ, MLC ಕಿಶೋರ್ ಕುಮಾರ್ ಪತ್ನಿಯನ್ನು ಮೋದಿಯವರ ಸ್ವಾಗತಕ್ಕೆ ಕಳಿಸಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ: BJP ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ವಿಟ್ಲ, ಡಿ.6: ‘ಪಕ್ಷದ ಓರ್ವ ಸಾಮಾನ್ಯ ಮಹಿಳಾ ಕಾರ್ಯಕರ್ತರಾಗಿರುವ MLC ಕಿಶೋರ್ ಕುಮಾರ್ ರ ಪತ್ನಿಯನ್ನು ಪ್ರಧಾನಿಯವರ ಸ್ವಾಗತಕ್ಕೆ ಕಳುಹಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡಿರುವ, ಕಿಶೋರ್ ರ ಪತ್ನಿಯನ್ನು ಪ್ರಧಾನಿಯ ಸ್ವಾಗತಕ್ಕೆ ಕಳುಹಿಸಿರುವುದನ್ನು ಜಿಲ್ಲಾಧ್ಯಕ್ಷನಾಗಿ ಸಮರ್ಥಿಸಿಕೊಳ್ಳುತ್ತೇನೆ’ ಎಂದು BJP ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ವಿಟ್ಲದಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಯವರು ಉಡುಪಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರಣ ಅಲ್ಲಿಯವರು ಎಲ್ಲ ನಿಭಾಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲವರಿಗೆ ಅವಕಾಶ ಕಲ್ಪಿಸಲಾಗಿತ್ತು. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲಾಗಿದೆ. ಅದೇ ರೀತಿ ಮಹಿಳಾ ಮೋರ್ಚಾದಲ್ಲಿ ಕೆಲಸ ಮಾಡುವ ವಿಧಾನ ಪರಿಷತ್ ಸದಸ್ಯರ ಪತ್ನಿಗೂ ಅವಕಾಶ ನೀಡಲಾಗಿದೆ. ಇದರಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರ ಪತ್ನಿ ಸಮಾಜದಲ್ಲಿ ಪಕ್ಷದೊಂದಿಗೆ, ಸಂಘಟನೆಯೊಟ್ಟಿಗೆ ಇರುವಂತಹವರು. ಅವರು ಯಾವುದೇ ಅಪರಾಧ ಹಿನ್ನಲೆಯನ್ನು ಹೊಂದಿಲ್ಲ. ಒಬ್ಬ ಸಾಮಾನ್ಯ ಮಹಿಳೆಯನ್ನು ಪ್ರಧಾನಿಯ ಬಳಿಗೆ ಕಳುಹಿಸಿದ್ದನ್ನು ಅನಾವಶ್ಯಕವಾಗಿ ವಿವಾದ ಮಾಡುವ ಬದಲು, ಮುಂದೆ ಇದೇ ರೀತಿ ಅನೇಕ ಕಾರ್ಯಕರ್ತರಿಗೆ ಅವಕಾಶ ನೀಡುವ ಕಾರ್ಯವಾಗಬೇಕೆಂಬುದು ನಮ್ಮ ಆಶಯ ಎಂದರು.





