ಬಿಜೆಪಿ ಪಕ್ಷ ʼವೋಟ್ ಚೋರಿʼ ಮಾಡಿ ಅಧಿಕಾರದ ಗದ್ದುಗೆಗೇರಿದೆ: ಇನಾಯತ್ ಅಲಿ

ಸುರತ್ಕಲ್: ಯುವ ಕಾಂಗ್ರೆಸ್ ಮಂಗಳೂರು ಉತ್ತರ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ವಿಧ್ವಂಸಕ ಕೃತ್ಯ ಮತ್ತು ʼವೋಟ್ ಚೋರಿʼ ವಿರುದ್ಧ ಬೃಹತ್ ಪಂಜಿನ ಮೆರವಣಿಗೆ ಬುಧವಾರ ಸಂಜೆ ಕೃಷ್ಣಾಪುರ ಕ್ರಾಸ್ ನಿಂದ ಸುರತ್ಕಲ್ ಪೇಟೆಯವರೆಗೆ ನಡೆಯಿತು.
ಬಳಿಕ ನಡೆದ ಸಭೆಯಲ್ಲಿ ಮಾತಾಡಿದ ಇನಾಯತ್ ಅಲಿ ಅವರು, “ಬಿಜೆಪಿ ಪಕ್ಷ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಾಮಮಾರ್ಗವನ್ನು ಅನುಸರಿಸುತ್ತಿರುವುದು ಖಂಡನೀಯ. ಮತಗಳ್ಳತನ ಈಗಾಗಲೇ ಬಯಲಾಗಿದ್ದು, ಒಂದೇ ಹೆಸರಲ್ಲಿ ಹತ್ತಾರು ಕಡೆಗಳಲ್ಲಿ ಮತ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ಬ್ರೆಝಿಲ್ ಮಾಡೆಲ್ ಒಬ್ಬಳ ಫೋಟೋ ಬಳಸಿ 22ಕ್ಕೂ ಹೆಚ್ಚು ಕಡೆಗಳಲ್ಲಿ ಮತದಾನ ಮಾಡಲಾಗಿದೆ. ಬಿಹಾರದಲ್ಲಿ ಅಧಿಕಾರಕ್ಕೇರಲು ಮತಗಳ್ಳತನವೇ ಪ್ರಮುಖ ಕಾರಣವಾಗಿದೆ. ದಿಲ್ಲಿಯಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳಲ್ಲಿ ಬಿಜೆಪಿ ಸರಕಾರದ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯಲಿದೆ” ಎಂದರು.
ರಾಷ್ಟ್ರೀಯ ಉಸ್ತುವಾರಿ ನಿಗಮ್ ಭಂಡಾರಿ ಮಾತಾಡಿ, “ಬಿಹಾರದಲ್ಲಿ ನಡೆದಿರುವ ವೋಟ್ ಚೋರಿಗೆ ಅಂತ್ಯ ಹಾಡುವ ಕಾಲ ಸನ್ನಿಹಿತವಾಗಿದೆ. ಮತದಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಹಾಕುವ ಮತ ಬೇರೆ ಪಕ್ಷದ ಪಾಲಾಗುತ್ತಿದೆ. ಇದನ್ನು ನಾವೆಲ್ಲರೂ ಒಗ್ಗೂಡಿ ತಡೆಯಬೇಕು” ಎಂದರು.
ಪದ್ಮರಾಜ್ ಆರ್. ಮಾತಾಡಿ, “ಬಿಹಾರದಲ್ಲಿ ಕೊನೆಯ ಹಂತದ ಮತದಾನದ ಹಿಂದಿನ ದಿನ ದಿಲ್ಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಯುತ್ತದೆ ಎಂದರೆ ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇಶದ ಪ್ರಮುಖ ತನಿಖಾ ಸಂಸ್ಥೆಗಳು, ಗುಪ್ತಚರ ಇಲಾಖೆಗಳು ಕೇಂದ್ರ ಸರಕಾರದ ಅಧೀನದಲ್ಲಿದ್ದರೂ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಪಡೆಯಲು ವೋಟ್ ಚೋರಿ ಅಸ್ತ್ರವನ್ನು ಬಳಸಿಕೊಂಡಿದೆ. ಇಂತಹ ವೋಟ್ ಚೋರಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಹೋರಾಟಗಳು ನಡೆಯಬೇಕು. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಒಬ್ಬರೇ ಅಲ್ಲ ಅವರೊಂದಿಗೆ ನಾವೆಲ್ಲರೂ ನಿಲ್ಲಬೇಕು” ಎಂದರು.
ವೇದಿಕೆಯಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಕಲ್ಯಾಣ್ ತೇಜಸ್, ಇಬ್ರಾಹಿಂ ನವಾಝ್, ಪುರುಷೋತ್ತಮ್ ಚಿತ್ರಾಪುರ, ಸದಾಶಿವ ಶೆಟ್ಟಿ, ಅನಿಲ್, ಬಾಹುಬಲಿ ಮತ್ತಿತರರು ಉಪಸ್ಥಿತರಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಧನ್ಯವಾದ ಸಲ್ಲಿಸಿದರು.







