ದ.ಕ. ಜಿಲ್ಲೆಯ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ತೀವ್ರ ಕೊರತೆ
ವೆನ್ಲಾಕ್ನಲ್ಲಿ ಮೊದಲ ಬಾರಿ ರಕ್ತದ ಸಂಗ್ರಹ ಡಬಲ್ ಡಿಜಿಟ್ ಯುನಿಟ್ಗೆ ಇಳಿಕೆ

ಸಾಂದರ್ಭಿಕ ಚಿತ್ರ
ಮಂಗಳೂರು : ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ತೀವ್ರ ಕೊರತೆ ಕಂಡು ಬಂದಿದೆ.
ಆ ಕಾರಣದಿಂದಾಗಿ ಆಸ್ಪತ್ರೆಗಳು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ರೋಗಿಗಳ ಸಂಬಂಧಿಕರು ರಕ್ತಕ್ಕಾಗಿ ಅಲೆದಾಡುವಂತಾಗಿದೆ. ಕಳೆದ 15 ದಿನಗಳಿಂದ ರಕ್ತದ ಸಮಸ್ಯೆ ತೀವ್ರಗೊಂಡಿದೆ.
ರಕ್ತದ ಕೊರತೆ ಕಾರಣದಿಂದಾಗಿ ನಿತ್ಯ ಡಯಾಲಿಸಿಸ್ ಮಾಡಿಸ ಬೇಕಾದ ರೋಗಿಗಳು, ಅಪಘಾತದಿಂದ ಗಾಯಗೊಂಡು ತೀವ್ರ ರಕ್ತಸ್ರಾವದ ಸಮಸ್ಯೆಗೊಳಗಾದವರು ತೊಂದರೆ ಎದುರಿಸುವಂತಾ ಗಿದೆ ಎಂದು ತಿಳಿದು ಬಂದಿದೆ.
ಶಾಲಾ, ಕಾಲೇಜುಗಳಿಗೆ ರಜೆಯ ಪರಿಣಾಮ: ರಕ್ತದಾನ ಶಿಬಿರ ಗಳು ಈಗ ನಡೆಯುತ್ತಿಲ್ಲ. ಬಿಸಿಲು, ಕಾಲೇಜುಗಳ ಪರೀಕ್ಷೆ, ರಜೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ರಕ್ತದ ಕೊರತೆ ಇರುವ ಕಾರಣ ದಿಂದಾಗಿ ಬ್ಲಡ್ ಬ್ಯಾಂಕ್ಗಳು ಜಾಗೃತಿ ಮೂಡಿ ಸುವ ಕಾರ್ಯವನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ.
ಕೊರತೆ ನೀಗಿಸುವ ಪ್ರಯತ್ನ: ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದ ಸಂಗ್ರಹ ಸಾಮಾನ್ಯವಾಗಿ ಉಳಿದ ಬ್ಲಡ್ ಬ್ಯಾಂಕ್ಗಳಿಗಿಂತ ಜಾಸ್ತಿ ಇರುತ್ತದೆ. ಆದರೆ ಇದೀಗ ಪ್ರಥಮ ಬಾರಿಗೆ ರಕ್ತ ಸಂಗ್ರಹ ಅಲ್ಲೂ ಕಡಿಮೆಯಾಗಿದೆ.
ಲಾಕ್ಡೌನ್ ಸಮಯದಲ್ಲ್ ರಕ್ತದಾನ ಶಿಬಿರಗಳು ಕಡಿಮೆಯಾದ ಕಾರಣದಿಂದಾಗಿ ರಕ್ತ ಸಂಗ್ರಹ ಕಡಿಮೆ ಇತ್ತು. ಆದರೆ ವೆನ್ಲಾಕ್ನ ರಕ್ತ ನಿಧಿಯಲ್ಲಿ ರಕ್ತದ ಕೊರತೆ ಇರಲಿಲ್ಲ. ಇದೇ ಮೊದಲ ಬಾರಿ ಇಂತಹ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ದ.ಕ. ಜಿಲ್ಲೆಯಲ್ಲಿ 13 ಬ್ಲಡ್ ಬ್ಯಾಂಕ್ಗಳಿದ್ದು, ಎಲ್ಲ ಕಡೆ ರಕ್ತದ ಕೊರತೆ ಇದೆ.
ಕೆಲವು ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತ ಪಡೆದರೆ ಅಷ್ಟೇ ಪ್ರಮಾಣದಲ್ಲಿ ರಕ್ತವನ್ನು ವಾಪಸ್ ಮಾಡಬೇಕು. ಆದರೆ ರೆಡ್ ಕ್ರಾಸ್ನಲ್ಲಿ ನಿಗದಿತ ಶುಲ್ಕ ಪಾವತಿಸಿದರೆ ರಕ್ತ ಸಿಗುತ್ತದೆ. ಅಲ್ಲಿ ರಕ್ತದ ಕೊರತೆ ಇರುವುದು ಕಡಿಮೆ. ಈಗ ಅಲ್ಲೂ ರಕ್ತದ ಸಮಸ್ಯೆ ಇದೆ.
ಮೊದಲ ಬಾರಿ ಡಬಲ್ ಡಿಜಿಟ್ಗೆ ಇಳಿಕೆ: ಸಾಮಾನ್ಯವಾಗಿ 300 ಯುನಿಟ್ ರಕ್ತ ಸಂಗ್ರಹವಿದ್ದ ವೆನ್ಲಾಕ್ ಆಶ್ಪತ್ರೆಯಲ್ಲಿ ಇದೀಗ 90 ಯುನಿಟ್ಗೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬ್ಲಡ್ ಬ್ಯಾಂಕ್ಗಳು ಎದುರಿಸುತ್ತಿರುವ ರಕ್ತದ ಸಂಗ್ರಹದ ಕೊರತೆಯನ್ನು ಗಮನಿಸಿದ ರಕ್ತದಾನಿ ಸಿದ್ದೀಕ್ ಮಂಜೇಶ್ವರ ತಮ್ಮ ತಂಡದ ಮೂಲಕ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು, ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ಗೆ ರವಿವಾರ 20 ಯುನಿಟ್ ರಕ್ತ ಒದಗಿಸಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ನ ಅಧಿಕಾರಿ ಡಾ.ಶರತ್ ಕುಮಾರ್ ತಿಳಿಸಿದ್ದಾರೆ.