ಝುಲೈಖಾ ಯೆನೆಪೋಯ ಕ್ಯಾನ್ಸರ್ ಸಂಸ್ಥೆಯಲ್ಲಿ ಅಸ್ಥಿಮಜ್ಜೆಯ ಕಸಿ ಚಿಕಿತ್ಸೆ

ಮಂಗಳೂರು, ನ.28: ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಮಂಗಳೂರಿನ ಝುಲೈಖಾ ಯೆನೆಪೋಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೈಗೆಟುಕುವ ದರದಲ್ಲಿ ಅಸ್ಥಿಮಜ್ಜೆಯ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಂಸ್ಥೆಯ ಹಿರಿಯ ಹೆಮಟೊ ಆಂಕಾಲಜಿಸ್ಟ್ ಡಾ. ರಾಜೇಶ್ ಕೃಷ್ಣ ತಿಳಿಸಿದರು.
ಝುಲೈಖಾ ಯೆನೆಪೋಯ ಕ್ಯಾನ್ಸರ್ ಸಂಸ್ಥೆ ರಕ್ತ ಮತ್ತು ಅಸ್ಥಿಮಜ್ಜೆ ಕ್ಯಾನ್ಸರ್ ಕಾಯಿಲೆಗಳ ಚಿಕಿತ್ಸೆಗೆ ಪ್ರಮುಖ ಕೇಂದ್ರ ವಾಗಿದೆ. ಈ ಕೇಂದ್ರದಲ್ಲಿ ಇಲ್ಲಿಯವರೆಗೂ 20ಕ್ಕೂ ಹೆಚ್ಚು ಯಶಸ್ವಿ ಸ್ವ- ಅಸ್ಥಿಮಜ್ಜೆ(ಆಟೋಲೋಗಸ್) ಮತ್ತು ಪರ ಮೂಲದ (ಅಲೋಜೆನಿಕ್) ಅಸ್ಥಿಮಜ್ಜೆ ಕಸಿಯನ್ನು ನನ್ನ ನೇತೃತ್ವದಲ್ಲಿ ನಡೆಸಲಾಗಿದ್ದು, ಇಲ್ಲಿಯವರೆಗೂ ಯಾವುದೇ ಚಿಕಿತ್ಸೆಗೆ ಸಂಬಂಧಿಸಿದ ಸಾವು ಸಂಭವಿಸಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮರುಕಳಿಸಿದ ಮೈಲಾಯ್ಡ್ ಲ್ಯುಕೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದ 40 ವರ್ಷದ ರೋಗಿಗೆ ಈ ಚಿಕಿತ್ಸೆಯನ್ನು ನೀಡಲಾಯಿತು. ರೋಗಿಗೆ ಸಂಪೂರ್ಣ ಹೊಂದಾಣಿಕೆಯ ದಾನಿಗಳು ಸಿಗದ ಕಾರಣ, ಸಹೋದರನಿಂದ ಅರ್ಧ ಹೊಂದಾಣಿಕೆಯ (ಹ್ಯಾಪ್ಲೊ-ಐಡೆಂಟಿಕಲ್) ಕಸಿಯನ್ನು ಮಾಡಲಾಯಿತು. ದಾನಿಯು ವಿಭಿನ್ನ ರಕ್ತದ ಗುಂಪನ್ನು ಹೊಂದಿದ್ದು, ಇದು ಬಹಳ ಕ್ಲಿಷ್ಟಕರವಾದ ಕಾರ್ಯ ವಿಧಾನವಾಗಿದ್ದರೂ ಸಹ ರೋಗಿಯು ಸಣ್ಣ ಸೋಂಕಿನೊಂದಿಗೆ ಚೇತರಿಸಿಕೊಂಡಿದ್ದರು. ಚಿಕಿತ್ಸೆ ಪೂರ್ಣಗೊಂಡು 6 ತಿಂಗಳು ಕಳೆದಿದ್ದು ರೋಗಿಯು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದರು.
ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಮಕ್ಕಳ ಅಸ್ಥಿಮಜ್ಜೆ ಕಸಿಯನ್ನು ಈ ಕೇಂದ್ರದಲ್ಲಿ ನಡೆಸಲಾಗಿದೆ. ಮೈಲಾಯ್ಡ್ ಲ್ಯುಕೇಮಿಯಾ ದಿಂದ ಬಳಲುತ್ತಿದ್ದ 14 ವರ್ಷದ ರೋಗಿಗೆ ಸಂಪೂರ್ಣ ಹೊಂದಾಣಿಕೆ ಇರುವ ಅಸ್ಥಿಮಜ್ಜೆಯನ್ನು ಅವರ ಸಹೋದರಿಯಿಂದ ಪಡೆದು ಈ ಚಿಕಿತ್ಸೆಯನ್ನು ನೆರವೇರಿಸಲಾಯಿತು. ಚಿಕಿತ್ಸೆ ಸಂಪೂರ್ಣಗೊಂಡು ಈಗ 3 ತಿಂಗಳಾಗಿದ್ದು, ಅವರು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮಗುವು ಗ್ರಾಮೀಣ ಬಡ ಕುಟುಂಬದ ಹಿನ್ನಲೆಯವರಾ ಗಿದ್ದು, ಚಿಕಿತ್ಸಾ ವೆಚ್ಚವನ್ನು ಗುಂಪು ಹೂಡಿಕೆಯಿಂದ (ಕ್ರೌಡ್ ಫಂಡಿಂಗ್) ಸಂಗ್ರಹಿಸಲಾಗಿದ್ದು, ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ. ಇತರ ಕಡೆಗಳಲ್ಲಿ ಈ ಚಿಕಿತ್ಸೆಗೆ 35 ಲಕ್ಷ ರೂ. ವೆಚ್ಚವಾಗುತ್ತದೆ. ನಮ್ಮ ಸಂಸ್ಥೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡಿದ್ದೇವೆ ಎಂದರು.
ಮಕ್ಕಳ ಆಂಕಾಲಜಿಸ್ಟ್ ಡಾ. ಅನುಷಾ ಹೆಗಡೆ, ರಕ್ತಕೇಂದ್ರದ ಮುಖ್ಯಸ್ಥೆ ಡಾ. ಇಂದಿರಾ ಪುತ್ರನ್, ರೇಡಿಯೋಥೆರಪಿ ಮುಖ್ಯಸ್ಥ ಡಾ. ದಿನೇಶ್ ಎಂ., ಅರಿವಳಿಕೆ ತಜ್ಞೆ ಡಾ. ಶಿಲ್ಪಾ ಭಟ್, ಡಾ. ಬೋನಿ ಉಪಸ್ಥಿತರಿದ್ದರು.







