ಮಂಗಳೂರಿನಲ್ಲಿ ಬೋಸ್ ಪ್ರೊಫೆಷನಲ್‌ನ ಸಂಶೋಧನಾ, ಅಭಿವೃದ್ಧಿ ಕೇಂದ್ರ| ಸ್ಥಳೀಯ ಪ್ರತಿಭೆಗಳಿಗೆ ಅವಕಾಶ: ಸಿಇಓ ಜಾನ್ ಮೈಯೆರ್

ಮಂಗಳೂರು, ಸೆ.11: ಧ್ವನಿ ವ್ಯವಸ್ಥೆಯ ಸಾಧನಗಳ ದೈತ್ಯ ಜಾಗತಿಕ ಕಂಪೆನಿ ಅಮೆರಿಕದ ‘ಬೋಸ್ ಪ್ರೊಫೆಷನಲ್’ ಇದೀಗ ಬಂದರು ನಗರ ಮಂಗಳೂರಿನಲ್ಲಿ ಮೊದಲ ಸಮರ್ಪಿತ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಬೋಸ್ ಪ್ರೊಫೆಷನಲ್ ಸಿಇಒ ಜಾನ್ ಮೈಯೆರ್ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಮಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸ್ಥಾಪನೆಯ ವಿಚಾರವನ್ನು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸಾಕಷ್ಟಿರುವ ಸ್ಥಳೀಯ ಪ್ರತಿಭೆಗಳ ನೆರವಿನಲ್ಲಿ ತಮ್ಮ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರು ಚಿಂತನೆ ನಡೆಸಿದ್ದಾರೆ.
‘ಬೋಸ್ ಪ್ರೊಫೆಸನಲ್’ನ ಭಾರತದಲ್ಲಿನ ವ್ಯವಹಾರಗಳಿಗೆ ಮಂಗಳೂರು ಕೇಂದ್ರವಾಗಲಿದೆ. ಅಲ್ಲದೆ ಮಂಗಳೂರು ಕೇಂದ್ರವು ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾತ್ರ ಸೀಮಿತಗೊಳ್ಳದೆ ಮಾರಾಟ, ಕಾರ್ಯಾಚರಣೆಗಳು ಮತ್ತು ಹಣಕಾಸು ವಿಚಾರಗಳಲ್ಲಿ ಜಾಗತಿಕ ವ್ಯವಹಾರಗಳಿಗೆ ಬೋಸ್ ಪ್ರೊಫೆಸನಲ್‌ಗೆ ಮಂಗಳೂರು ಕೇಂದ್ರದಿಂದ ಉತ್ತಮ ಬೆಂಬಲ ದೊರೆಯಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಕೇವಲ ಓರ್ವ ವ್ಯಕ್ತಿಯೊಂದಿಗೆ ಆರಂಭಗೊಂಡ ಮಂಗಳೂರಿನ ಕೇಂದ್ರದಲ್ಲಿ ಇದೀಗ 25 ಮಂದಿ ಇದ್ದಾರೆ. ಶೀಘ್ರದಲ್ಲೇ ಸಿಬ್ಬಂದಿಯ ಸಂಖ್ಯೆ 75ಕ್ಕೆ ಏರಲಿದೆ ಜಾನ್ ಮೈಯರ್ ಮಾಹಿತಿ ನೀಡಿದ್ದಾರೆ.
ಭಾರತವು ವೃತ್ತಿಪರ ಆಡಿಯೊಗೆ ಪ್ರಮುಖ ಮಾರುಕಟ್ಟೆಯಾಗಿ ವೇಗವಾಗಿ ಬದಲಾಗುತ್ತಿದೆ ಎಂದು ಹೇಳಿದರು.
ಮಂಗಳೂರು ತಂತ್ರಜ್ಞಾನ ಕ್ಲಸ್ಟರ್: ಸಚಿವ ಪ್ರಿಯಾಂಕ್ ಖರ್ಗೆ
ಬೋಸ್ ತನ್ನ ಪ್ರಧಾನ ಕಚೇರಿಯಾಚೆಗಿನ ಮೊದಲ ಮೀಸಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಇದು ನಾವೀನ್ಯತೆಯ ಕೇಂದ್ರವಾಗಿ ನಗರದ ಬೆಳವಣಿಗೆಯ ಮಹತ್ವದ ಪ್ರಬಲ ಸಂಕೇತ ಎಂದು ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಬೋಸ್ ಪ್ರೊಫೆಷನಲ್ ಸಿಇಒ ಜಾನ್ ಮೈಯೆರ್ ನೀಡಿರುವ ಸಂದರ್ಶನದ ವರದಿಯನ್ನು ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿರುವ ಸಚಿವರು, ಹೊಸ ಘಟಕವು ಎಂಬೆಡೆಡ್ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಮತ್ತು ಕ್ಲೌಡ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಲಿದ್ದು, ಮಾರಾಟ, ಕಾರ್ಯಾಚರಣೆಗಳು ಮತ್ತು ಹಣಕಾಸುಗಳಿಗೂ ವಿಸ್ತರಿಸುವುದರೊಂದಿಗೆ ಅದರ ಜಾಗತಿಕ ವ್ಯವಹಾರಕ್ಕೆ ಸಮಗ್ರ ಬೆಂಬಲ ನೆಲೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ಇದು ಕರ್ನಾಟಕದಾದ್ಯಂತ ತಂತ್ರಜ್ಞಾನ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ ಬೆಂಗಳೂರಿನಾಚೆಗೆ ಯೋಜನೆಯನ್ನು ಮೌಲ್ಯೀಕರಿಸುತ್ತದೆ.
ಬಿಎಎಸ್‌ಎಫ್‌ನಂತಹ ಜಾಗತಿಕ ಹೆಸರುಗಳಿಂದ ಹಿಡಿದು ಇನ್ಫೋಸಿಸ್ ತನಕ ಮಂಗಳೂರು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಲಸ್ಟರ್ ಆಗಿ ಬೆಳೆದು ನಿಂತಿದೆ. ಭಾರತದ ಸಿಲಿಕಾನ್ ಬೀಚ್ ಎಂದು ಗುರುತಿಸಲ್ಪಟ್ಟಿರುವ ನಗರವು, ಉದ್ಯಮಗಳನ್ನು ಆತ್ಮವಿಶ್ವಾಸದಿಂದ ಸ್ಥಾಪಿಸಬಹುದಾದ, ಆವಿಷ್ಕರಿಸಬಹುದಾದ ಮತ್ತು ವಿಸ್ತರಿಸಬಹುದಾದ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







