ಬಸ್ ಚಾಲಕನ ಎಳೆದು ಹಾಕಿ ಹಲ್ಲೆ ಆರೋಪ: ದೂರು, ಪ್ರತಿದೂರು ದಾಖಲು

ಸುಳ್ಯ: ಕೆಎಸ್‍ಆರ್‍ಟಿಸಿ ಬಸ್ ಚಾಲಕನನ್ನು ಬಸ್‍ನಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಗುರುಪ್ರಸಾದ್(36) ಅವರು ಕೆಎಸ್‍ಆರ್‍ಟಿಸಿ ಚಾಲಕರಾಗಿದ್ದು, ಮಂಗಳವಾರ ಸಂಜೆ ಬಸ್ಸಿನಲ್ಲಿ ಕಡಬದಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿರುವಾಗ ಸುಳ್ಯ ಪೇಟೆಯ ಹಳೆಗೇಟು ಎಂಬಲ್ಲಿಗೆ ತಲುಪಿದಾಗ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಎರಡು ಕಾರು ಹಾಗೂ ಇನ್ನೊಂದು ವಾಹನದ ಹಿಂಬದಿ ಭಾಗ ತಾಗಿದ ವಿಚಾರಕ್ಕೆ ಕಾರು ಮಾಲಿಕ ಚಂದ್ರ ಕೊಳ್ಚಾರ್ ಎಂಬವರು ಬಸ್ ಚಾಲಕ ಗುರುಪ್ರಸಾದ್ ಅವರನ್ನು ಬಸ್ಸಿನಿಂದ ಎಳೆದು ಹಲ್ಲೆ ಮಾಡಿ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಆರೋಪಿಸಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿ ದೂರು:
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ್ನಾಡಿನ ಚಂದ್ರಶೇಖರ್ ಎಂಬವರು ಪ್ರತಿ ದೂರು ನೀಡಿದ್ದು, ಮಂಗಳವಾರ ರಾತ್ರಿ ಮಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯದ ಹಳೆಗೇಟು ರಸ್ತೆಯ ಬಲ ಬದಿಯಲ್ಲಿ ಕಾರನ್ನು ನಿಲ್ಲಿಸಿ ಪೂಜಾ ಸಾಮಾಗ್ರಿಗಳನ್ನು ಖರೀದಿ ಮಾಡುವಾಗ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನೂ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸಿ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು, ಚಂದ್ರಶೇಖರ್ ಅವರ ಕಾರಿನ ಬಾಗಿಲು ಮತ್ತು ಹಿಂಬಾಗಕ್ಕೆ ಹಾನಿ ಉಂಟುಮಾಡಿದ್ದು, ಈ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ ಉಡಾಫೆಯಿಂದ ಉತ್ತರ ನೀಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







