ತೆರಿಗೆ ವಂಚಿಸಿ ಕಾರು ನೋಂದಣಿ: ಲೋಕಾಯುಕ್ತ ಪೊಲೀಸರಿಂದ ಆರ್‌ಟಿಒ ಕಚೇರಿ ತಪಾಸಣೆ

ಮಂಗಳೂರು, ನ18: ತೆರಿಗೆ ವಂಚಿಸಿ ಐಷಾರಾಮಿ ಕಾರನ್ನು ನೋಂದಣಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯ ಆರ್ ಟಿಒ ಕಚೇರಿಯಲ್ಲಿ ಮಂಗಳವಾರ ಕಡತ ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಆರ್ ಟಿಒ ಕಚೇರಿಯಲ್ಲಿ ತೆರಿಗೆ ಕಡಿಮೆ ಮಾಡಿ ಬಿಎಂಡಬ್ಲ್ಯು ಕಾರೊಂದನ್ನು ನೋಂದಣಿ ಮಾಡಲಾಗಿದೆ. ಇದರಿಂದ ಸರಕಾರಕ್ಕೆ ಸಂದಾಯ ಆಗಬೇಕಾಗಿದ್ದ ಸುಮಾರು 85 ಲಕ್ಷ ರೂ. ತೆರಿಗೆ ವಂಚನೆಯಾಗಿತ್ತು. ನೋಂದಣಿಗೆ ಸಂಬಂಧಿಸಿದಂತೆ ಮಂಗಳೂರು ಆರ್‌ಟಿಒ ಕಚೇರಿಯಲ್ಲೂ ಕೆಲವೊಂದು ಪ್ರಕ್ರಿಯೆಗಳು ನಡೆದಿದೆ ಎನ್ನಲಾಗಿದೆ. ಹಾಗಾಗಿ ಎರಡೂ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಡತ ಪರಿಶೀಲನೆಯ ವೇಳೆ ಕೆಲವು ಮಾಹಿತಿಗಳು ಲಭ್ಯವಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು. ಅಲ್ಲಿನ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಲೋಕಾಯುಕ್ತ ಎಸ್ ಪಿ ತಿಳಿಸಿದ್ದಾರೆ.
Next Story





